

ಹೊಳೆನರಸೀಪುರ : ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಕಿರಣ್(33) ಭಾನುವಾರ ಹೃದಯಾಘಾತದಿಂದ ಮೃತಪಟ್ಟಿರುವುದಕ್ಕೆ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಆರೋಪಿಸಿ ಕುಟುಂಬದವರು ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.
ಕಿರಣ್ ಸಾವಿಗೆ ಈ ಹಿಂದೆ ಬಿಇಒ ಆಗಿದ್ದ ಭಾಗ್ಯಮ್ಮ ಹಾಗೂ ಕಚೇರಿಯ ಸಹಾಯಕ ಸುನೀಲ ನೀಡಿದ ಮಾನಸಿಕ ಹಿಂಸೆ ಕಾರಣವಾಗಿದೆ. ಅವರಿಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಿ ಕ್ರಮ ವಹಿಸಬೇಕು ಎಂದು ಮೃತನ ಪತ್ನಿ, ಕುಟುಂಬದ ಸದಸ್ಯರು ಹಾಗೂ ವಿವಿಧ ಸಂಘಟನೆ ಮುಖಂಡರು ಸೋಮವಾರ ಆಗ್ರಹಿಸಿದರು.
ಘಟನೆ ಹಿನ್ನೆಲೆ: ತಾಲೂಕಿನ ಹಳೇಕೋಟೆ ಪ್ರೌಢಶಾಲೆಯಲ್ಲಿ ಕಿರಣ್ ದ್ವಿತೀಯ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲದಿನಗಳ ಹಿಂದೆ ಅಲ್ಲಿಂದ ಬಿಇಒ ಕಚೇರಿಗೆ ನಿಯೋಜನೆಗೊಂಡು 5 ವರ್ಷಕೆಲಸ ನಿರ್ವಹಿಸಿದ್ದರು. ಪ್ರಭಾರ ಬಿಇಒ ಆಗಿದ್ದ ಭಾಗ್ಯಮ್ಮ ಅವರು ಕಿರಣನನ್ನು ಹಳೇಕೋಟೆ ಪ್ರೌಢಶಾಲೆಗೆ ವಾಪಸ್ ಕಳುಹಿಸಿದ್ದರು.
ನಂತರ ಸೋಮಲಿಂಗೇಗೌಡ ಬಿಇಒ ಆಗಿ ಇಲ್ಲಿಗೆ ಬಂದರು. ಕೆಲಸದ ಒತ್ತಡ ಹೆಚ್ಚಾಗಿದೆ ಎಂದು
ಕಿರಣನನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದರು. ಏಕಾಏಕಿ ಆ. 31 ರಂದು ಕಿರಣನನ್ನು ಮತ್ತೆ ಹಳೇಕೋಟೆ ಪ್ರೌಢಶಾಲೆಗೆ ವರ್ಗಾಯಿಸಲಾಯಿತು. ಇದರ ಹಿಂದೆ ಭಾಗ್ಯಮ್ಮ ಅವರ ಕೈವಾಡ ಇದೆ. ಶಾಸಕ ರೇವಣ್ಣ ಅವರ ಮೇಲೆ ಒತ್ತಡ ತಂದು ಆಕೆ ಕಿರಣನನ್ನು ಹಳೇಕೋಟೆ ಪ್ರೌಢಶಾಲೆಗೆ ವರ್ಗ ಮಾಡಿಸಿದ್ದಾರೆ. ಇದರಿಂದ ನೊಂದ ಆತ ಕುಟುಂಬದವರೊಂದಿಗೆ ಬೇಸರ ತೋಡಿಕೊಂಡಿದ್ದ. ಹೃದಯಾಘಾತಕ್ಕೂ ಇದೇ ಒತ್ತಡ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ. ಸೋಮಶೇಖರ್ ಮಾತನಾಡಿ ಶಾಸಕ ಎಚ್.ಡಿ ರೇವಣ್ಣ ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಕಿರಣನ ಸಾವಿಗೆ ಅವರೂ ಪರೋಕ್ಷ ಕಾರಣ ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಲಕ್ಷ್ಮಣ, ಮುಖಂಡ ಶ್ರೇಯಸ್ ಪಟೇಲ್, ದಲಿತ ಸಂಘಟನೆಗಳ ಮುಖಂಡರಾದ ಚಿನ್ನಸ್ವಾಮಿ, ರವಿ, ಚಂದ್ರಶೇಖರ್, ಹನುಮಂತರಾಜು, ಪುರಸಭೆ ಮಾಜಿ ಅಧ್ಯಕ್ಷೆ ತಾಯಮ್ಮ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.