ಬಿಇಒ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

29..pyp..01
ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಇಒ ಬಸವರಾಜ್ ಅವರನ್ನು ಕೂಡಲೇ ಅಮಾನತು ಪಡಿಸುವಂತೆ ಆಗ್ರಹಿಸಿ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ತಹಸೀಲ್ದಾರ್ ಕೆ.ಚಂದ್ರಮೌಳಿ ಅವರಿಗೆ ಮನವಿ ಸಲ್ಲಿಸಲಾಯಿತು.
Published on


ಪಿರಿಯಾಪಟ್ಟಣ: ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಇಒ ಬಸವರಾಜ್ ಅವರನ್ನು ಕೂಡಲೇ ಅಮಾನತು ಪಡಿಸುವಂತೆ ಆಗ್ರಹಿಸಿ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಬಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ, ಬಿಇಒ ಬಸವರಾಜ್ ಮತ್ತು ಅವರ ವಾಹನ ಚಾಲಕ ಹಮೀದುಲ್ಲ ಷರೀಫ್ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ದೂರು ಸಲ್ಲಿಸಲಾಗಿತ್ತು. ದೂರಿನ ಅನ್ವಯ ಕ್ರಮ ಕೈಗೊಂಡಿದ್ದ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಚಾಲಕ ಹಮೀದುಲ್ಲ ಷರೀಫ್‌ರನ್ನು ಅಮಾನತು ಮಾಡಿದ್ದರು. ಆದರೆ ಬಿಇಒ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಹಾಗೂ ಈ ಪ್ರಕರಣ ಕುರಿತಂತೆ ಶಿಕ್ಷಣ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಬಿಇಒ ಬಸವರಾಜು ಇತ್ತೀಚೆಗೆ ನ್ಯಾಯಾಲಯದಿಂದ ಜಾಮೀನು ಪಡೆದು ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವ ಬಿಇಒ ಬಸವರಾಜು ದಲಿತ ನೌಕರರ ವಿರುದ್ಧ ಸೇಡಿನ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಬಿಇಒ ಬಸವರಾಜ್ ಅವರಿಗೆ ಜನಪ್ರತಿನಿಧಿಗಳ ಬೆಂಬಲವಿದ್ದು, ಇದರಿಂದಾಗಿ ದರ್ಪದಿಂದ ದಲಿತರ ವಿರುದ್ಧ ಮಾತನಾಡುತ್ತಿದ್ದಾರೆ. ಕೂಡಲೇ ಬಿಇಒ ಅವರನ್ನು ಅಮಾನತು ಪಡಿಸಬೇಕು ಹಾಗೂ ಇಲಾಖೆಯ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬಸವರಾಜ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸಿದಲ್ಲಿ ಜಿಲ್ಲಾ ಅಧಿಕಾರಿಗಳ ಕಚೇರಿ ಮತ್ತು ರಾಜ್ಯಮಟ್ಟದ ಅಧಿಕಾರಿಗಳ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕೆ.ಚಂದ್ರಮೌಳಿ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಸಿ.ಕೆ.ರಾಜಣ್ಣ, ಮೂಲನಿವಾಸಿ ಅಂಬೇಡ್ಕರ್ ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಎಸ್.ಅಶೋಕ್, ಚಿಕ್ಕ ಮಹದೇವ್, ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ರಾಜ್ಯ ಕಾರ್ಯದರ್ಶಿ ಎಂ.ಕೆ.ಕಾಂತರಾಜು, ಮುಖಂಡರಾದ ಈರಾಜ್, ಗಿರೀಶ್, ಚೆಲುವರಾಜ್, ದೇವೇಂದ್ರ, ರವಿ, ಜಗದೀಶ್, ಗೋಪಾಲ್, ತಮ್ಮಣ್ಣಯ್ಯ, ಆರ್.ಡಿ.ಮಹದೇವ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net