

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ತ್ವರಿತ ಬಸ್ ಸಂಚಾರ ವ್ಯವಸ್ಥೆಯಡಿ (ಬಿಆರ್ಟಿಎಸ್) ಹವಾನಿಯಂತ್ರಿತ ಬಸ್ ಚಿಗರಿ ಸಂಚಾರವನ್ನು ಜೂನ್ 5ರಿಂದ ಪುನರಾರಂಭ ಮಾಡಲಾಗುತ್ತಿದೆ.
ಕೋವಿಡ್-19 ನಿಯಂತ್ರಣ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಸದ್ಯಕ್ಕೆ ಬೆಳಗ್ಗೆ 6ರಿಂದ ರಾತ್ರಿ 9ರ ವರೆಗೆ ಹುಬ್ಬಳ್ಳಿ ಕೇಂದ್ರೀಯ ಬಸ್ ನಿಲ್ದಾಣ ಹಾಗೂ ಧಾರವಾಡದ ಬಿಆರ್ಟಿಎಸ್ ನಿಲ್ದಾಣದವರೆಗೆ ಮಾತ್ರ ಬಸ್ ಕಾರ್ಯಾಚರಣೆ ನಡೆಸಲಾಗುವುದು.
ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಓಡಾಟ ಹೆಚ್ಚಿಸಲಾಗುವುದು. ಮಾರ್ಚ್ 21ರ ನಂತರ ಮಾಸಿಕ ಪಾಸ್, ಸ್ಮಾರ್ಟ್ ಕಾರ್ಡ್ ಪಡೆದಿದ್ದ ಪ್ರಯಾಣಿಕರು ಮುಂದಿನ ಮಾನ್ಯತಾ ಅವಧಿಗೆ ಪಿಒಎಸ್ ಕೌಂಟರ್ಗಳಲ್ಲಿ ಕ್ಯೂಆರ್, ಮಾಸಿಕ ಪಾಸ್ ಟಿಕೆಟ್ಗಳನ್ನು ಸ್ಮಾರ್ಟ್ ಕಾರ್ಡ್ ತೋರಿಸಿ ಪಡೆದುಕೊಳ್ಳಬಹುದಾಗಿದೆ.
ಸಾರ್ವಜನಿಕರು ಕರೊನಾ ಹರಡುವುದನ್ನು ತಪ್ಪಿಸಲು ಹಾಗೂ ಸಮಯ ಉಳಿಸಲು ಇ-ಪರ್ಸ್ ಸ್ಮಾರ್ಟ್ ಕಾರ್ಡ್ ಪಡೆಯಲು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಕೋರಿದ್ದಾರೆ.