

ಬೇಲೂರು: ಬೇಲೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ.ಶಿವರಾಂ ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ರೋಡ್ ಶೋ ಮೂಲಕ ಮೆರವಣಿಗೆಯಲ್ಲಿ ತೆರಳಿ ಚುನಾವಣಾಧಿಕಾರಿಗೆ ತಮ್ಮ ಎರಡನೇ ಉಮೇದುವಾರಿಕೆ ಸಲ್ಲಿಸಿದರು.
ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಆವರಣದಿಂದ ಕಾಂಗ್ರೆಸ್ ಮುಖಂಡರ ಹಾಗೂ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ತೆರೆದ ವಾಹನದಲ್ಲಿ ಮುಖ್ಯರಸ್ತೆ ಮೂಲಕ ತಾಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಚುನಾವಣಾಧಿಕಾರಿಗೆ ಉಮೇದುವಾರಿಕೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ವೈ.ಎನ್.ಕೃಷ್ಣೇಗೌಡ ಹಾಗೂ ಗ್ರಾನೈಟ್ ರಾಜಶೇಖರ್ ಸಾಥ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಬಿ.ಶಿವರಾಂ, ನಾಲ್ಕು ತಿಂಗಳಿಂದ ಬೇಲೂರಿನಲ್ಲಿ ಕಾಂಗ್ರೆಸ್ ಬಣಗಳಾಗಿ ನೆಲ ಕಚ್ಚಿದೆ ಎಂದು ಮತದಾರರನ್ನು ಹಾಗೂ ಕಾರ್ಯಕರ್ತರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ವಿರೋಧ ಪಕ್ಷಗಳ ಮುಖಂಡರು ಅಪಪ್ರಚಾರ ಮಾಡುತಿದ್ದರು. ಆದರೆ ಈಗ ನಾವೆಲ್ಲ ಒಂದೇ ವೇದಿಕೆಯಲ್ಲಿ ಒಗ್ಗಟ್ಟಿನ ಬಲದಿಂದ ಮತ್ತೆ ಬೇಲೂರಿನಲ್ಲಿ ಅಧಿಕಾರ ಹಿಡಿಯಲಿದ್ದೇವೆ. ನಮ್ಮ ಕಾಂಗ್ರೆಸ್ ಶಕ್ತಿ ಏನೆಂಬುದನ್ನು ತೋರಿಸಿದ್ದೇವೆ. ಬಿಜೆಪಿ ದುರಾಡಳಿತದ ವಿರುದ್ಧ ಬೇಸತ್ತ ಜನ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ನಮ್ಮ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಪಕ್ಷವನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ. ನಮ್ಮಲ್ಲಿ ಆಕಾಂಕ್ಷಿಗಳು ಇದ್ದಿದ್ದು ನಿಜ, ಆದರೆ ಎಲ್ಲರನ್ನೂ ಒಗ್ಗೂಡಿಸಿ ಈ ಬಾರಿ ಬಿಜೆಪಿ ವಿರುದ್ಧ ನಾವು ಕೆಲಸ ಮಾಡುವ ಮೂಲಕ ತಾಲೂಕಿನಲ್ಲಿ ಕಾಂಗ್ರೆಸ್ ಈ ಬಾರಿ ಕ್ಷೇತ್ರದಲ್ಲಿನ ಮುಖಂಡರು ಮತ್ತು ಮತದಾರರ ಆಶೀರ್ವಾದದಿಂದ ಗೆಲುವು ಸಾಧಿಸುವುದು ಶತಸಿದ್ಧ ಎಂದರು.
ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಮಾತನಾಡಿ, ಹೈಕಮಾಂಡ್ ನಿರ್ದೇಶನದಂತೆ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ನಿಮ್ಮೆಲ್ಲರ ಸಹಕಾರ ಅತಿ ಮುಖ್ಯ. ಕಾಂಗ್ರೆಸ್ ಬೇಲೂರಿನಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ವ್ಯಕ್ತಿಗಿಂತ ನಮಗೆ ಪಕ್ಷವೇ ಮುಖ್ಯ. ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ವೈ.ಎನ್.ಕೃಷ್ಣೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಈ.ಎಚ್.ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್, ಮುಖಂಡರಾದ ಎಂ.ಆರ್.ವೆಂಕಟೇಶ್, ಶಾಂತಕುಮಾರ್, ಜಮಾಲ್, ಧರ್ಮೇಗೌಡ, ತುಳಸೀದಾಸ್, ಸೈಯದ್ ತೌಫಿಕ್, ಜುಬೇರ್, ಇಕ್ಬಾಲ್, ದಾನಿ, ಅಶೋಕ್, ಅಬ್ದುಲ್ ಸಮದ್ ಇತರರಿದ್ದರು.