ಬಿ.ವೈ.ರಾಘವೇಂದ್ರ ಉತ್ಸಾಹ ಬತ್ತದ ಗಟ್ಟಿಗ: ಶ್ರೀ ಸಿದ್ದಲಿಂಗ ಸ್ವಾಮೀಜಿ

SKP WEB
Published on

ಶಿಕಾರಿಪುರ: ನಮ್ಮ ಪ್ರತಿ ವಸಂತ ಸಾರ್ಥಕ್ಯದಿಂದ ತುಂಬಿ ನಿಲ್ಲಬೇಕು. ಆಗ ನಮ್ಮ ಬದುಕು ತೃಪ್ತಿದಾಯಕ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಜನ್ಮದಿನಾಚರಣೆ ಅದನ್ನು ಸಾಕ್ಷೀಕರಿಸಿದೆ. ಅವರು ಶತಾಯುಷಿಯಾಗಿ ಹೀಗೆಯೇ ಜನಸೇವೆ ಮಾಡುವ ಭಾಗ್ಯ ದೊರೆಯಲಿ ಎಂದು ಕಾಳೇನಹಳ್ಳಿ ಶಿವಯೋಗಾಶ್ರಮದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಹಾರೈಸಿದರು.

ಬಿವೈಆರ್ ಜನ್ಮದಿನದ ಪ್ರಯುಕ್ತ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ರಾಘವೇಂದ್ರ ಅವರು ಅಪ್ಪಟ ಅವರ ತಂದೆಯ ಹಾಗೆ. ಜನಸೇವೆ ಎಂದರೆ ಅವರಿಗೆ ಯುದ್ಧೋನ್ಮಾದದಂತೆ. ಅವರೊಬ್ಬ ಉತ್ಸಾಹ ಬತ್ತದ ಗಟ್ಟಿಗ ಮತ್ತು ಚೈತನ್ಯಶೀಲ ಯುವಕ. ಕಿರಿ ವಯಸ್ಸಿನಲ್ಲಿ ಹಿರಿದಾದ ಸಾಧನೆ ಮಾಡಿದ್ದಾರೆ ಎಂದು ಬಣ್ಣಿಸಿದರು.

ಅವರ ಪ್ರತಿ ಹೆಜ್ಜೆಗಳಲ್ಲೂ ಜನಸೇವೆಯ ತುಡಿತವಿದೆ. ಅವರ ಕಾರ್ಯಗಳಲ್ಲಿ ಸಮಾಜಮುಖಿ ಚಿಂತನೆಗಳೇ ಕಾಣುತ್ತಿವೆ. ಅವರೊಬ್ಬ ನಾಯಕ ಎನ್ನುವುದಕ್ಕಿಂತ ಜನಾನುರಾಗಿ ಎಂಬುದು ಸರಿ. ಅವರ ನಿರಂತರ ಪರಿಶ್ರಮದಿಂದ ಅವರಿಗೆ ಕೇಂದ್ರ ಮಂತ್ರಿಯಾಗುವ ಅವಕಾಶ ದೊರಕಲಿ. ಅವರಲ್ಲಿ ಎಂದಿಗೂ ಬತ್ತದ ಅಭಿವೃದ್ಧಿಯ ಹಸಿವಿದೆ. ಅದು ಅವರನ್ನು ಯಶಸ್ವಿ ಪುರುಷರ ಸಾಲಿನಲ್ಲಿ ನಿಲ್ಲಿಸಿದೆ. ಅವರ ಸಹೋದರ ವಿಜಯೇಂದ್ರ ರಾಜ್ಯ ಮಟ್ಟದಲ್ಲಿ ತಂದೆಯವರ ಕಾರ್ಯದಲ್ಲಿ ಒತ್ತಾಸೆಯಾಗಿದ್ದಾರೆ. ಅವರೊಬ್ಬ ಅಪೂರ್ವ ಸಂಘಟಕ ಎಂದು ಹೇಳಿದರು.

ತಾಲೂಕಿನ ಜನತೆಗೆ ಎಂದಿಗೂ ಋಣಿ: ಜನರ ಅಭಿಮಾನ ನನ್ನನ್ನು ಮೂಗನನ್ನಾಗಿಸಿದೆ. ನನ್ನ ಯಶಸ್ಸು ತಾಲೂಕಿನ ಜನತೆಗೆ ತಲುಪಬೇಕು. ಜನಪರ ಕಾರ್ಯ ಮಾಡಲು ಭೀಮಬಲ ತುಂಬಿದವರು, ಹರಸಿ ಹಾರೈಸಿದವರು ನೀವು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ನಾನು ನಿಮ್ಮ ಆಶಯಗಳಿಗೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ. ನಿಮ್ಮ ಪ್ರೀತಿ, ಅಭಿಮಾನ ನನ್ನ ಕಂಗಳಲ್ಲಿ ಆನಂದಭಾಷ್ಪ ಸುರಿಸಿದೆ. ತಾಲೂಕಿನ ಜನತೆಗೆ ನಾನು ಯಾವತ್ತೂ ಋಣಿಯಾಗಿದ್ದೇನೆ ಎಂದು ಭಾವನಾತ್ಮಕವಾಗಿ ನುಡಿದರು.

ತೊಗರ್ಸಿ ಮಳೆಹಿರೇಮಠದ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ, ಜಡೆಯ ಶ್ರೀ ಮಹಂತ ಸ್ವಾಮೀಜಿ, ಹಾರನಹಳ್ಳಿ ಶ್ರೀ ಶಿವಯೋಗಿ ಶಿವಾಚಾರ್ಯರು, ಚೌಕಿಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಶಾಂತಾಪುರದ ಶ್ರೀ ಶಾಂತವೀರೇಶ್ವರ ಸ್ವಾಮೀಜಿ, ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ತಿಪ್ಪಾಯಿಕೊಪ್ಪದ ಶ್ರೀ ವಿರೂಪಾಕ್ಷ ಸ್ವಾಮೀಜಿ, ಕೊಣಂದೂರು ಶ್ರೀ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net