

ಚಾಮರಾಜನಗರ: ತಾಲೂಕಿನ ಆಲೂರು ಗ್ರಾಮದಲ್ಲಿರುವ ಸ್ಮಾರಕ ಭವನದ ಚಿರಶಾಂತಿಧಾಮದಲ್ಲಿ ಮಾಜಿ ರಾಜ್ಯಪಾಲ ದಿವಂಗತ ಬಿ.ರಾಚಯ್ಯ ಅವರ 25ನೇ ವರ್ಷದ ಸ್ಮರಣೆ ಮತ್ತು ಗೌರಮ್ಮ ಅವರ 11ನೇ ದಿನದ ಉತ್ತರ ಕ್ರಿಯಾದಿ ಪ್ರಯುಕ್ತ ಮಂಗಳವಾರ ಪೂಜೆ ಸಲ್ಲಿಕೆ ಮಾಡಲಾಯಿತು.
ಬಿ.ರಾಚಯ್ಯ ಮತ್ತು ಗೌರಮ್ಮ ಅವರ ಪುತ್ರರಾದ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ಆರ್.ಬಾಲರಾಜು ಮತ್ತು ಕುಟುಂಬಸ್ಥರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಬಿ.ರಾಚಯ್ಯ ಅವರು ಮಾಡಿದ ಮಾದರಿ ಸಮಾಜ ಸೇವೆ ನಮ್ಮೊಂದಿಗಿದೆ. ಗೌರಮ್ಮ ಅವರು ಬಿ.ರಾಚಯ್ಯ ಅವರ ಕೆಲಸಗಳಿಗೆ ಬೆಂಬಲ ನೀಡುತ್ತಿದ್ದರು ಎಂದರು. ಇದೇ ವೇಳೆ ತಾಳವಾಡಿಯ ಕೆ.ರಾಮದಾಸ್ ತಂಡದಿಂದ ಮಂಟೆಸ್ವಾಮಿ ಕಾವ್ಯ ಕಥನ ಕಾರ್ಯಕ್ರಮ ನಡೆಯಿತು. ಇದೇ ವೇಳೆ ರಾಚಯ್ಯ ಸ್ಮಾರಕ ಭವನದ ಆವರಣದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಪೂಜಾ ಕಾರ್ಯದಲ್ಲಿ ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರೊ.ನಂಜಯ್ಯ ಹೊಂಗನೂರು ಮತ್ತು ಇತರರು ಹಾಜರಿದ್ದರು.
ಕೃತಜ್ಞತೆ ತಿಳಿಸಿದ ಪುತ್ರ:
ಆಲೂರಿನ ಬಿ.ರಾಚಯ್ಯ ಸ್ಮಾರಕ ಭವನದಲ್ಲಿ ದಿ.ಗೌರಮ್ಮನವರ ಪುಣ್ಯಸ್ಮರಣೆ ಮತ್ತು ದಿ.ಬಿ.ರಾಚಯ್ಯನವರ 25ನೇ ವರ್ಷದ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮನ ಸಲ್ಲಿಸಿದ ಕ್ಷೇತ್ರದ ಜನತೆಗೆ, ಬಿ.ರಾಚಯ್ಯ ಅಭಿಮಾನಿಗಳಿಗೆ, ಹಿತೈಷಿಗಳಿಗೆ, ಆಲೂರಿನ ಗ್ರಾಮಸ್ಥರಿಗೆ ಕೃತಜ್ಞತೆಗಳನ್ನು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದ್ದಾರೆ.