

ಚಾಮರಾಜನಗರ: ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರು ನಾಡುಕಂಡ ಶ್ರೇಷ್ಠ ರಾಜಕಾರಣಿಯಾಗಿದ್ದು, ಸರಳತೆ ಮತ್ತು ಸಜ್ಜನ ವ್ಯಕ್ತಿತ್ವದಿಂದ ಹಲವರಿಗೆ ಮಾದರಿಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಾಜಿ ರಾಜ್ಯಪಾಲ ಬಿ.ರಾಚಯ್ಯನವರ 25ನೇ ಪುಣ್ಯಸ್ಮರಣೆ ಹಾಗೂ ಅವರ ಕೊಡುಗೆಗಳ ಕುರಿತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶ್ರೇಷ್ಠ ಮಾರ್ಗದಲ್ಲಿ ನಡೆದರು. ಸರಳತೆ ಮತ್ತು ಸಜ್ಜನ ವ್ಯಕ್ತಿತ್ತ್ವದಿಂದ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ವಿವಿಧ ಇಲಾಖೆಗಳ ಸಚಿವರಾಗಿ, ಮಾಜಿ ರಾಜ್ಯಪಾಲರಾಗಿ ಚಾಮರಾಜನಗರ ಜಿಲ್ಲೆಯ ಸಾವಿರಾರು ಜನರಿಗೆ ಉದ್ಯೋಗದಾತರಾಗಿದ್ದಾರೆ. ನೀರಾವರಿ, ಶಿಕ್ಷಣ, ಕೃಷಿ ,ಕೈಗಾರಿಕೆ, ಅರಣ್ಯ ವಸತಿ ಮುಂತಾದ ಕ್ಷೇತ್ರಗಳಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದರು.
ತಮಿಳು ಸಂಘದ ಅಧ್ಯಕ್ಷ ಜಗದೀಶನ್ ಮಾತನಾಡಿ, ಬಿ.ರಾಚಯ್ಯ ಅವರ ಸರಳತೆಯನ್ನು ನಾವು ಮರೆಯಲಾಗದು. ರಾಜ್ಯದ ಅಭಿವೃದ್ಧಿಯ ಕುರಿತು ದೂರದೃಷ್ಟಿಯನ್ನು ಇಟ್ಟುಕೊಂಡಿದ್ದರು. ಬಿ.ರಾಚಯ್ಯ ಅವರ ಪ್ರೇರಣೆಯಿಂದ ಹಲವಾರು ಯುವಕರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ ಎಂದರು.
ಬರಹಗಾರ ಲಕ್ಷ್ಮಿ ನರಸಿಂಹ, ಕನ್ನಡ ಹೋರಾಟಗಾರ ಶ್ರೀನಿವಾಸ ಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ರವಿಚಂದ್ರ ಪ್ರಸಾದ್, ಪದ್ಮ ಪುರುಷೋತ್ತಮ್, ಸರಸ್ವತಿ ,ಬಿ.ಕೆ.ಆರಾಧ್ಯ , ಶಿವಲಿಂಗ ಮೂರ್ತಿ, ಪ್ರಕಾಶ್, ಕಿರಣ್, ಸೂರ್ಯ, ಮಹದೇವಯ್ಯ ಇತರರು ಹಾಜರಿದ್ದರು.