

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಾತಿ ಜನಗಣತಿ ವಿಚಾರವಾಗಿ ಉಡುಪಿ ಪೇಜಾವರ ಶ್ರೀಗಳು ನೀಡಿದ ಹೇಳಿಕೆ ಕುರಿತು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಲಘುವಾಗಿ ಮಾತನಾಡಿದ್ದನ್ನು ಖಂಡಿಸಿ ಬ್ರಾಹ್ಮಣ ಸಮುದಾಯದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಜಾತಿ ಜನಗಣತಿ ವಿಚಾರದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥ ಸ್ವಾಮೀಜಿ ಗೌರವಯುತವಾಗಿ ತಮ್ಮ ಅಭಿಪ್ರಾಯ ಮಂಡಿಸಿದ್ದರು. ಆದರೆ ಶ್ರೀಗಳ ಹೇಳಿಕೆ ಕುರಿತು ಬಿ.ಕೆ. ಹರಿಪ್ರಸಾದ ಲಘುವಾಗಿ ಮಾತನಾಡಿರುವುದು ಖಂಡನೀಯ. ಕೂಡಲೇ ಸಾರ್ವಜನಿಕವಾಗಿ ಶ್ರೀಗಳ ಹಾಗೂ ಸಮಾಜದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಬಿ.ಕೆ. ಹರಿಪ್ರಸಾದ ವಿರುದ್ಧ ಕಾನೂನುಕ್ರಮ ಜರುಗಿಸಬೇಕು. ಕೂಡಲೇ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹರಿಪ್ರಸಾದ ಕ್ಷಮೆ ಕೇಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ರವಾನಿಸಲಾಯಿತು.
ಧಾರವಾಡ ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಆರ್.ಡಿ. ಕುಲಕರ್ಣಿ, ಕೋಶಾಧ್ಯಕ್ಷ ದಿನೇಶ ಲಕ್ಷ್ಮೇಶ್ವರ, ರಮೇಶ ಭಟ್ಟ, ಕೃಷ್ಣ ದೇಶಪಾಂಡೆ, ಕೃಷ್ಣ ಕಟ್ಟಿ, ಸುಧೀಂದ್ರ ದೇಶಪಾಂಡೆ, ವಿನಾಯಕ ಜೋಶಿ, ಮಾಧವ ಶೂರಪಾಲಿ, ಬಾಬು ಬಹುಗುಣಿ, ಮಂಜುಳಾ ಕುಲಕರ್ಣಿ, ಜಿ.ಎನ್. ಇನಾಮದಾರ, ಎನ್.ಆರ್. ಕುಲಕರ್ಣಿ, ಜಿ.ಜಿ. ಹಂದಿಗೋಳ, ಎಸ್.ಎಸ್. ಕರಗುದರಿ, ಎಂ.ಎನ್. ಧಾರವಾಡಕರ, ವಿ.ಎನ್. ಕುಲಕರ್ಣಿ, ಶಿವರಾಮ ಶಿರಗುಪ್ಪಿ, ಸುರೇಶ ಕುಲಕರ್ಣಿ, ವಿ.ಎಸ್. ಕುಲಕರ್ಣಿ, ಧಾರವಾಡ ತಾಲೂಕು ಬ್ರಾಹ್ಮಣ ಸಭಾ, ಅಖಿಲ ಭಾರತ ಮಧ್ವ ಮಹಾಮಂಡಳ, ವಿಪ್ರ ಸೌಹಾರ್ದ ಸಹಕಾರಿ ಸಂಘ, ಪ್ರಹ್ಲಾದ ವಿದ್ಯಾರ್ಥಿ ನಿಲಯ, ಚಿದಂಬರ ಸೇವಾ ಸಮಾಜ, ಯೋಗ ಮಿತ್ರ, ಭಜನಾಮಂಡಳಿ ಸದಸ್ಯರು, ಇತರರು ಇದ್ದರು.