

ವಿಜಯಪುರ: ಬಿ.ಎಸ್. ಯಡಿಯೂರಪ್ಪಗೆ ಉತ್ತರ ಕರ್ನಾಟಕದ ವೀರಶೈವ ಲಿಂಗಾಯತ ಮಠಾಧೀಶರು ಬೆಂಬಲ ಸೂಚಿಸಿದ್ದಾರೆ.
ವಿಜಯಪುರ ಜಿಲ್ಲೆಯ 11 ಕ್ಕೂ ಅಧಿಕ ಮಠಾಧೀಶರು ಸೇರಿ ಯಡಿಯೂರಪ್ಪ ಅವರನ್ನೇ ಸಿಎಂ ಆಗಿ ಮುಂದುವರಿಸಲು ಒಕ್ಕೋರಲಿನಿಂದ ಒತ್ತಾಯಿಸಿದ್ದಾರೆ.
ಯಡಿಯೂರಪ್ಪ ಒಬ್ಬ ಧೀಮಂತ ನಾಯಕ. ಅವರ ಸೇವೆ ನಾಡಿಗೆ ಅವಶ್ಯಕವಾಗಿದೆ. ಇನ್ನೂ ಅವರ ಅಧಿಕಾರವಧಿ ಇದೆ. ಹೀಗಾಗಿ ಅವರನ್ನು ಮುಂದುವರಿಸಬೇಕೆಂದು ಗುರುವಾರ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯ ಮಾತನಾಡಿ, ಯಡಿಯೂರಪ್ಪ ಅವರಿಗೆ ಈಗಾಗಲೇ ದಕ್ಷಿಣ ಕರ್ನಾಟಕ ಮಠಾಧೀಶರು ಯಡಿಯೂರಪ್ಪ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಉತ್ತರ ಕರ್ನಾಟಕದ ಮಠಾಧೀಶರಿಂದಲೂ ಬೆಂಬಲ ವ್ಯಕ್ತಪಡಿಸಲಾಗುವುದು.
ಮನಗೂಳಿಯ ಸಂಗನಬಸವ ಶಿವಾಚಾರ್ಯರು ಮಾತನಾಡಿ, ಯಡಿಯೂರಪ್ಪ ಉತ್ತಮ ಆಡಳಿತ ನೀಡುವ ಸಂದರ್ಭದಲ್ಲಿ ಅವರನ್ನು ಕೆಳಗಿಳಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಬಿಜೆಪಿ ಶಾಸಕರೇ ನೀವೇಕೆ ಯಡಿಯೂರಪ್ಪ ಬೆನ್ನೆಲುಬಾಗಿ ನಿಲ್ಲುತ್ತಿಲ್ಲ? ಮಠಾಧೀಶರೆಲ್ಲ ಯಡಿಯೂರಪ್ಪ ಪರ ಇರುವಾಗ ಶಾಸಕರೇಕೆ ಅವರ ಬೆನ್ನಿಗೆ ನಿಲ್ಲುತ್ತಿಲ್ಲ? ಎಂದು ಪ್ರಶ್ನಿಸಿ ದರಲ್ಲದೇ ಯಡಿಯೂರಪ್ಪ ಪರ ಸಮಾವೇಶಕ್ಕೆ ನಾವೆಲ್ಲ ಸಿದ್ದರಿದ್ದೇವೆ. ಬಿಜೆಪಿ ಹೈಕಮಾಂಡ್ ಈ ಬಗ್ಗೆ ಗಮನಿಸಲಿ ಎಂದರು.
ಬುರಾಣಪುರದ ಯೋಗೇಶ್ವರಿ ಮಾತಾಜಿ ಮಾತನಾಡಿ,
ಹೋರಾಟದಿಂದಲೇ ಮೇಲೆ ಬಂದವರು ಯಡಿಯೂರಪ್ಪ. ಸಿಎಂ ಸ್ಥಾನದಿಂದ ಅವರ ಬದಲಾವಣೆ ಸರಿಯಲ್ಲ. ಯಡಿಯೂರಪ್ಪ ಎಲ್ಲ ಧರ್ಮ, ಜಾತಿಯವರನ್ನು ಸಮನಾಗಿ ಕಂಡಿದ್ದಾರೆ. ಹೀಗಾಗಿ ಅವರ ಆಡಳಿತ ಇನ್ನೂ ಸ್ವಲ್ಪ ದಿನ ಬೇಕು ಎಂದರು.
ಶಿರೋಳದ ಶಂಕರಾನಂದ ಸ್ವಾಮೀಜಿ ಮಾತನಾಡಿ, ಯಡಿಯೂರಪ್ಪ ರಾಜ್ಯದ ಸಂಕಷ್ಟ ಪರಿಸ್ಥಿತಿ ನಿಭಾಯಿಸಿದ್ದಾರೆ. ಅವರ ಆಡಳಿತ ಉತ್ತಮವಾಗಿದ್ದು ಅವರನ್ನೇ ಮುಖ್ಯಮಂತ್ರಿ ಯಾಗಿ
ಮುಂದುವರಿಸಬೇಕೆಂದರು.
ರಾಜಾಹುಲಿ ಎಂದೇ ಖ್ಯಾತಿ ಪಡೆದ ಯಡಿಯೂರಪ್ಪ ಶರಣರ ಆಶಯದಂತೆ ಎಲ್ಲ ಧರ್ಮ, ಜಾತಿ ಮರೆತು ಎಲ್ಲರ ಶ್ರೇಯೋಭಿವೃದ್ದಿಗೆ ಶ್ರಮಿಸಿದ್ದಾರೆ. ಹೀಗಾಗಿ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೆಂದು ಇಂಡಿಯ ಡಾ.ಸ್ವರೂಪಾನಂದ ಸ್ವಾಮೀಜಿ ಹೇಳಿದರು.
ವಿಜಯಪುರ
ಜಿಲ್ಲಾ ಮಠಾಧೀಶರ ಒಕ್ಕೂಟದ ಕಾರ್ಯದರ್ಶಿ ಚಂದ್ರಶೇಖರಶಿವಾಚಾರ್ಯರು ಮಾತನಾಡಿ,
ಯಡಿಯೂರಪ್ಪ ಅವರ ಸೇವೆ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಮಧ್ಯಂತರದಲ್ಲಿ ಅವರನ್ನು ಬದಲಾಯಿಸುವುದು ಅವರಿಗೆ ಮಾಡುವ ಅವಮಾನ. ಯಡಿಯೂರಪ್ಪ ಅವರಿಗೆ ಅವಧಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕೆಂದರು.
ಮನಗೂಳಿಯ ಸಂಗನಬಸವ ಶ್ರೀ, ಕಮರಿ ಮಠದ ಸಿದ್ದಲಿಂಗ ದೇವರು, ಡಾ.ಸ್ವರೂಪಾನಂದ ಸ್ವಾಮೀಜಿ, ನಿತ್ಯಾನಂದ ಸ್ವಾಮೀಜಿ, ಬೆಟಗುಡ್ಡದ ಚನ್ನಮಲ್ಲಯ್ಯ ಸ್ವಾಮೀಜಿ, ಗುರುಲಿಂಗ ಶಿವಾಚಾರ್ಯ, ತಡವಲಗಾದ ರಾಚೋಟೇಶ್ವರ ಸ್ವಾಮೀಜಿ, ಅಥರ್ಗಾದ ಮುರುಗೇಂದ್ರ ಸ್ವಾಮೀಜಿ, ತಿಕೋಟಾದ ಚನ್ನಮಲ್ಲಕಾರ್ಜುನ ಸ್ವಾಮೀಜಿ ಮತ್ತಿತರರಿದ್ದರು.