

ಚಿತ್ರದುರ್ಗ: ಭೂಮಿಯಲ್ಲಿ ಭಾರತ ಸೇರಿ ಎಲ್ಲ ದೇಶಗಳ ಗಡಿ ಪ್ರದೇಶ ಗುರುತಿಸಬಹುದು. ಆದರೆ, ಬಾಹ್ಯಾಕಾಶಕ್ಕೆ ಗಡಿ ಸಮಸ್ಯೆ ಇಲ್ಲ ಎಂದು ಇಸ್ರೋ ವಿಜ್ಞಾನಿ ಶಿವಾನಂದ ಕಾಮತ್ ಹೇಳಿದರು.
ಬೆಂಗಳೂರಿನ ಇಸ್ರೋ-ಯುಆರ್‌ಎಸ್‌ಸಿ ಹಾಗೂ ವಿದ್ಯಾವಿಕಾಸ ವಿದ್ಯಾಸಂಸ್ಥೆಯಿಂದ ಶಾಲೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಬಾಹ್ಯಾಕಾಶ ಸಪ್ತಾಹ(ವರ್ಲ್ಡ್ ಸ್ಪೇಸ್ ವೀಕ್ ಸೆಲೆಬ್ರೆಷನ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1957ರ ಅಕ್ಟೋಬರ್ 4ರಂದು ವಿಶ್ವದ ಪ್ರಪ್ರಥಮ ಕೃತಕ ಉಪಗ್ರಹ ರಚನೆ ಆಯಿತು. ಇದಕ್ಕಾಗಿ ಬಾಹ್ಯಾಕಾಶ ಸಪ್ತಾಹವನ್ನು ವಿಶ್ವಾದ್ಯಂತ ಅ. 4ರಿಂದ 10ರವರೆಗೆ ಆಚರಿಸಲಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶಕ್ಕೆ ಜನರು ಹೋಗುತ್ತಿದ್ದಾರೆ. ಅದರ ಗಡಿ ಗುರುತಿಸಲು ಎಂದಿಗೂ ಸಾಧ್ಯವಿಲ್ಲ. ಅದಕ್ಕಾಗಿ ವಿಶ್ವದ ಒಟ್ಟಾರೆ 99 ದೇಶಗಳು ಶಾಂತಿ ಒಪ್ಪಂದ ಮಾಡಿಕೊಂಡಿವೆ. ಅದರಲ್ಲಿ ಭಾರತವೂ ಒಂದು ಎಂದು ತಿಳಿಸಿದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಪೃಥ್ವೀಶ ಮಾತನಾಡಿ, ನಿತ್ಯ ಜೀವನದಲ್ಲಿ ವಿಜ್ಞಾನ ಅತ್ಯಂತ ಅವಶ್ಯಕ. ಅದಿಲ್ಲದ ಮಾನವರ ಬದುಕು ನಶ್ವರ. ಸಂವಹನ ಮಾಧ್ಯಮಗಳು ಕಾರ್ಯನಿರ್ವಹಿಸಲು ಉಪಗ್ರಹ ಸಹಕಾರಿ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಮುಂದೊಂದು ದಿನ ದೊಡ್ಡ ವಿಜ್ಞಾನಿಗಳಾಗಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಕಾರ್ಯದರ್ಶಿ ಬಿ. ವಿಜಯಕುಮಾರ್ ಮಾತನಾಡಿ, ಚಂದ್ರಯಾನ, ಉಪಗ್ರಹ ಸೇರಿ ವಿಜ್ಞಾನದ ಕುರಿತು ಉಪಯುಕ್ತ ಮಾಹಿತಿ ಪಡೆದುಕೊಳ್ಳಲು ವಸ್ತು ಪ್ರದರ್ಶನ ಸಹಕಾರಿಯಾಗಿದೆ ಎಂದು ತಿಳಿಸಿದರು.
ವಿಜ್ಞಾನಿಗಳ ತಂಡ 5, 6, 7ನೇ ತರಗತಿ ವಿದ್ಯಾರ್ಥಿಗಳ ಬಾಹ್ಯಾಕಾಶ ವಿಜ್ಞಾನ ಮಾದರಿಗಳ ಪ್ರದರ್ಶನ ಹಾಗೂ ವಿಜ್ಞಾನ ಮತ್ತು ಬಾಹ್ಯಕಾಶಕ್ಕೆ ಸಂಬಂಧಿಸಿದ ಮೆಮೋರಿ ಟೆಸ್ಟ್, 8, 9, 10ನೇ ತರಗತಿ ವಿದ್ಯಾರ್ಥಿಗಳಿಗೆ ಪಿಕ್ ಸ್ಪೀಚ್ ಮತ್ತು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ರಸಪ್ರಶ್ನೆ ಸ್ಪರ್ಧೆಗೆ ಪ್ರತಿ ಶಾಲೆಯಿಂದ ಮೂವರು ವಿದ್ಯಾರ್ಥಿಗಳ ಒಂದು ತಂಡ, ಪಿಕ್ ಸ್ಪೀಚ್‌ಗೆ 3 ಮಂದಿ, ಮೆಮೋರಿ ಟೆಸ್ಟ್ ವೈಯಕ್ತಿಕ ಸ್ಪರ್ಧೆಗೆ ಗರಿಷ್ಠ ಮೂವರು ಭಾಗವಹಿಸಿದ್ದರು. ಇದೇ ವೇಳೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಇಸ್ರೋ ವಿಜ್ಞ್ಞಾನಿಗಳಾದ ಸುಮಾ ಹಿರೇಮಠ್, ಆರ್. ಬಾಲಾಜಿ, ಟಿ.ಎಸ್. ಗೋವಿಂದರಾಜ, ಸುಮಾ ಎಸ್. ಲೊಂಕಡಿ, ಚಿತ್ರದುರ್ಗ ವಿಜ್ಞಾನ ಫೌಂಡೇಷನ್‌ನ ಎಚ್.ಎಸ್.ಟಿ. ಸ್ವಾಮಿ ಇತರರಿದ್ದರು. ಎನ್.ಜಿ. ತಿಪ್ಪೇಸ್ವಾಮಿ ಸ್ವಾಗತಿಸಿದರು. ಎಂ. ದೀಪಿಕಾ ನಿರೂಪಿಸಿದರು. ಶ್ರೀನಿಧಿ ವಂದಿಸಿದರು.