

ಮೈಸೂರು: ಬಾಹ್ಯಾಕಾಶ ವಲಯದಲ್ಲಿ ಕೆಲಸ ಮಾಡುವ ಇಸ್ರೋದಲ್ಲಿ ಹಲವು ಉದ್ಯೋಗವಕಾಶಗಳಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಇಸ್ರೋದ ಯು.ಆರ್.ರಾವ್ ಸ್ಯಾಟಲೆಟ್ ಸೆಂಟರ್‌ನ ವಿಜ್ಞಾನಿ ಡಾ.ಎನ್.ಕೆ.ರವಿಕಿರಣ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಸ್‌ಜೆಸಿಇ ಆವರಣದಲ್ಲಿರುವ ಜೆಎಸ್‌ಎಸ್ ಪಾಲಿಟೆಕ್ನಿಕ್‌ನಲ್ಲಿ ಮಂಗಳವಾರ ಆಯೋಜಿಸಿದ್ದ 2022-23ನೇ ಸಾಲಿನ ಪ್ರಥಮ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ತಂತ್ರಜ್ಞಾನ ಬಳಸಿಕೊಂಡು ವಿವಿಧ ದೇಶಗಳು ಬಾಹ್ಯಾಕಾಶದಲ್ಲಿ ಹಲವು ಸಾಧನೆ ಮಾಡಿವೆ. ಭಾರತವೂ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುತ್ತಿದ್ದು, ಚಂದ್ರಯಾನ-3, ಆದಿತ್ಯಯಾನ ಇದಕ್ಕೆ ಸಾಕ್ಷಿ. ಬಾಹ್ಯಾಕಾಶದಲ್ಲಿ ಕೆಲಸ ಮಾಡಬೇಕು ಎನ್ನುವವರಿಗೆ ಇಸ್ರೋ ಮೂಲಕ ಉದ್ಯೋಗವಕಾಶವಿದೆ. ಅದನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬಹುದು ಎಂದು ಹೇಳಿದರು.
ಭವಿಷ್ಯದಲ್ಲಿ ಡಾಟಾ ಸ್ಟ್ರಕ್ಚರ್, ಆರ್ಟಿಪಿಷಿಯಲ್ ಇಂಟೆಲಿಜೆನ್ಸ್, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ ಕ್ಷೇತ್ರಗಳಿಗೆ ಹೆಚ್ಚಿನ ಮಹತ್ವ ಸಿಗಲಿದೆ. ಈ ಕ್ಷೇತ್ರಗಳ ಜ್ಞಾನ ಪಡೆದುಕೊಳ್ಳಬೇಕು, ಉತ್ತಮ ಕೌಶಲ ಬೆಳೆಸಿಕೊಂಡು ದೇಶಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಎಲ್ಲ ಕ್ಷೇತ್ರದಲ್ಲೂ ತಂತ್ರಜ್ಞಾನದ ಬಳಕೆ ಹೆಚ್ಚಾಗಿದ್ದು, ವಿದ್ಯಾರ್ಥಿಗಳಿಗೆ ಅದರ ಅರಿವಿರಬೇಕು. ಕೌಶಲ ಗಳಿಸಿಕೊಂಡವರಿಗೆ ವಿಪುಲವಾದ ಅವಕಾಶಗಳಿದ್ದು, ಕೌಶಲ ಗಳಿಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಜ್ಞಾನ ಪಡೆದುಕೊಳ್ಳಬೇಕು. ಆಗಮಾತ್ರ ಏನು ಬೇಕಾದರೂ ಸಾಧನೆ ಮಾಡಬಹುದು. ಅಂದುಕೊಂಡ ಗುರಿ ಸಾಧನೆಯೆಡೆಗೆ ಪರಿಶ್ರಮದಿಂದ ಮುನ್ನಡೆದರೆ ಯಾವುದೂ ಅಸಾಧ್ಯವಲ್ಲ ಎಂದರು.
ಮೈಸೂರು ಇನ್ಫೋಸಿಸ್‌ನ ಆಡ್ವಾನ್ಸ್ ಇಂಜಿನಿಯರಿಂಗ್‌ನ ಪ್ರಾಂಶುಪಾಲ ಡಾ.ಬಿ.ಪಿ.ಶ್ರೀಕಂಠಗುಪ್ತ, ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್‌ನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ದೊಡ್ಡಯ್ಯ, ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗದ ಮುಖ್ಯಸ್ಥ ಡಾ.ಅರಸುಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು.
ಜೆಎಸ್‌ಎಸ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಕೆ.ಎಸ್.ಭಕ್ತವತ್ಸಲ ಅಧ್ಯಕ್ಷತೆ ವಹಿಸಿದ್ದರು.
ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಮಾಹಿತಿ ವಿಜ್ಞಾನ, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟಾನಿಕ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಮೆಕಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ 2022-23ನೇ ಸಾಲಿನಲ್ಲಿ ತೇರ್ಗಡೆಹೊಂದಿದ 123 ವಿದ್ಯಾರ್ಥಿಗಳು, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 22 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು.
ವಿವಿಧ ವಿಭಾಗದ ರ‌್ಯಾಂಕ್ ವಿಜೇತರು:
ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಜಿ.ಎನ್.ಮಂಜುನಾಥ್, ಕಂಪ್ಯೂಟರ್ ಸೈನ್ಸ್‌ನಲ್ಲಿ ಆರ್.ರಿಷಬ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಎಸ್.ಮನೋಜ್‌ಕುಮಾರ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟಾನಿಕ್ಸ್‌ನಲ್ಲಿ ವೈ.ನಿಶಾಂತ್, ಮಾಹಿತಿ ವಿಜ್ಞಾನದಲ್ಲಿ ಎಂ.ಯಶವಂತ್, ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸಹಿಲ್ ಚವಾಣ್, ಮೆಕಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಆರ್.ಮಾದೇಶ್ ಪ್ರಥಮ ರ‌್ಯಾಂಕ್ ಪಡೆದುಕೊಂಡರು.
ಕಿರಣ್ (ಸಿವಿಲ್ ಇಂಜಿನಿಯರಿಂಗ್), ಎಚ್.ವಿಶಾಲ್ (ಕಂಪ್ಯೂಟರ್ ಸೈನ್ಸ್), ಆರ್.ಉಲ್ಲಾಸ್ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್), ಜಿ.ಪ್ರಣತಿ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟಾನಿಕ್ಸ್ ಇಂಜಿನಿಯರಿಂಗ್), ಪಿ.ಸಂಜಯ್ (ಮೆಕ್ಯಾನಿಕಲ್ ಇಂಜಿನಿಯರಿಂಗ್) ದ್ವಿತೀಯ ರ‌್ಯಾಂಕ್ ಪಡೆದುಕೊಂಡರು.