

ಹಾಸನ: ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ವೃದ್ಧಿಸಿಕೊಳ್ಳುವುದನ್ನು ನಾವು ಕಲಿಯಬೇಕಿದೆ ಎಂದು ತತ್ವಪದ ಗಾಯಕ ನಾದಮಣಿ ನಾಲ್ಕೂರು ಹೇಳಿದರು.
ನಗರದ ಎವಿಕೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಎನ್‌ಎಸ್‌ಎಸ್ ಮತ್ತು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಘಟಕದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತತ್ವಪದ ಗಾಯನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮಗೆ ಎಲ್ಲವನ್ನು ಇಂದು ಕಲಿಸುತ್ತಾರೆ. ಆದರೆ ಪ್ರೀತಿಸುವುದು ಹೇಗೆ ಎಂಬುದನ್ನು ಕಲಿಸುವುದಿಲ್ಲ. ಅದರಲ್ಲೂ ಮನುಷ್ಯ ಮನುಷ್ಯರನ್ನು ಪ್ರೀತಿಸುವುದನ್ನು ಕಲಿಸುವುದಿಲ್ಲ. ಪಕ್ಕದಲ್ಲಿರುವ ಮನುಷ್ಯರ ದುಃಖಕ್ಕೆ ಸ್ಪಂದಿಸುವುದನ್ನು ಕಲಿಸುವುದಿಲ್ಲ. ಒಟ್ಟಿಗೆ ಬದುಕುವುದು ಹೇಗೆ ಎಂಬುದನ್ನು ಕಲಿಸುವ ಕಲಿಕಾ ವಿಧಾನಗಳೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಮನುಷ್ಯರು ಮುಖವಾಡಗಳ ಬದುಕಿನಲ್ಲಿ ದಿನದೂಡುತ್ತಿದ್ದಾನೆ. ಅದೆಷ್ಟೊ ಮಂದಿ ಮೇಲೆ ಅಸೂಹೆ ಇದೆ. ಎಷ್ಟು ಮಂದಿ ಜತೆ ಜಗಳವಿದೆ. ಇವೆಲ್ಲವನ್ನು ನಮ್ಮೊಳಗೆ ಇರಿಸಿಕೊಂಡು ಬಾಹ್ಯವಾಗಿ ಚಂದವಾಗಿ, ಒಳ್ಳೆಯವರಾಗಿ ಕಾಣಿಸಿಕೊಳ್ಳಲು ಬಯಸುತ್ತೇವೆ. ಪ್ರಾಮಾಣಿಕವಾಗಿ ನಮ್ಮ ಬಗ್ಗೆ ನಾವೇ ಆತ್ಮ ವಿಮರ್ಶೆ ಮಾಡಿಕೊಂಡಾಗ ನಾವು ಇಷ್ಟು ಕೆಟ್ಟವರೇ ಎಂದು ನಮಗೆ ನಾವೇ ಭಯ ಪಡಬೇಕಾಗುತ್ತದೆ ಎಂದರು.
ಕಾಲೇಜು ಪ್ರಾಂಶುಪಾಲ ಡಾ. ಸೀ.ಚ. ಯತೀಶ್ವರ್ ಮಾತನಾಡಿ, ಇಂದು ಮಾನವ ಕುಲವನ್ನು ಭಾವೈಕ್ಯದ ಬಂಧದಲ್ಲಿ ಬೆಸೆಯುವ ಅಗತ್ಯವಿದೆ. ನಾಡಿನ ಸಂತರು, ಶರಣರು, ದಾಸರು, ತತ್ವಪದಕಾರರು ತಮ್ಮ ಹಾಡು, ವಚನ, ಕೀರ್ತನೆ, ತತ್ವಪದಗಳ ಮೂಲಕ ವಿಶ್ವದ ಮನುಕುಲವನ್ನು ಎಲ್ಲಾ ರೀತಿಯ ಬೇಧಗಳಿಂದ ಬಿಡುಗಡೆಗೊಳಿಸಿ ವಿಶ್ವಮಾನವ ಸಂದೇಶವನ್ನು ಸಾರಿಕೊಂಡು ಬಂದಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಗಾಯಕರಾದ ನಾದಮಣಿ ನಾಲ್ಕೂರು ಅವರು ತತ್ವಪದಗಳನ್ನು ಹಾಡುತ್ತಲೇ ವಿದ್ಯಾರ್ಥಿಗಳಿಗೆ ಮನುಕುಲದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ.ಎಸ್.ಆರ್. ತಮ್ಮಯ್ಯ, ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಐಪಿಎಸಿ ಸಂಯೋಜಕರಾದ ಪ್ರೊ. ವಾರಿಜಾ, ಸಹ ಸಂಯೋಜಕರಾದ ಡಾ. ಎನ್.ಎಸ್. ಶಶಿಕಲಾ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಎಚ್.ಎನ್. ಶೈಲಜಾ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಚಾಲಕರಾದ ಪ್ರೊ. ಸಬೀಹಾ ಬೇಗಂ, ಕನ್ನಡ ವಿಭಾಗದ ಮಹಾಲಕ್ಷ್ಮೀ ಇತರರು ಉಪಸ್ಥಿತರಿದ್ದರು.