

ಕೆ.ಆರ್.ಪೇಟೆ: ತಾಲೂಕಿನ ಬಸದಿ ಹೊಸಕೋಟೆಯಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ಬಾಹುಬಲಿ ಮೂರ್ತಿಯ ಮರು ಪ್ರತಿಷ್ಠಾಪನಾ ಮಹೋತ್ಸವ ಶನಿವಾರ ನೆರವೇರಲಿದೆ.
ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳಗಡೆಯಾಗಿದ್ದ ಮೂರ್ತಿಗೆ ಮರು ಪ್ರತಿಷ್ಠಾಪನೆ ಮಾಡಿರಲಿಲ್ಲ. 2014ರಲ್ಲಿ ಅಭಿವೃದ್ಧಿಗೆ ಒಂದು ಟ್ರಸ್ಟ್ ಸ್ಥಾಪನೆಯಾದರೂ ಹಲವಾರು ಕಾರಣಗಳಿಂದ ಕೇವಲ ವಾರ್ಷಿಕ ಪೂಜೆಗಷ್ಟೇ ಸೀಮಿತವಾಗಿತ್ತು. ಇತ್ತೀಚೆಗೆ ಕ್ಷೇತ್ರಕ್ಕೆ ಆಗಮಿಸಿದ್ದ ಮುನಿಶ್ರೀ ಅಮೋಘಕೀರ್ತಿ ಮತ್ತು ಅಮರಕೀರ್ತಿ ಮುನಿಗಳು ಜೀರ್ಣಾವಸ್ಥೆಯಲ್ಲಿದ್ದ ಬಾಹುಬಲಿಯ ಶಿಲ್ಪ, ಅನಾಥ ಸ್ಥಿತಿಯಲ್ಲಿದ್ದ ಜಿನಬಿಂಬಗಳು, ಜಿನಬಸದಿಯ ಅವಶೇಷಗಳನ್ನು ಕಂಡು, ಕೂಡಲೇ ಕ್ಷೇತ್ರಾಭಿವೃದ್ದಿಗೆ ಸಂಕಲ್ಪ ಮಾಡಿ, ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ ನೀಡಿದ್ದರು.
ಇದಕ್ಕಾಗಿ ಕರ್ಮಯೋಗಿ ಚಾರಕೀರ್ತಿ ಭಟ್ಟಾರಕರು ಹಾಗೂ ಭುವನಕೀರ್ತಿ ಭಟ್ಟಾರಕರ ಮಾರ್ಗದರ್ಶನದಲ್ಲಿ ರಚನೆಯಾಗಿದ್ದ ಟ್ರಸ್ಟ್ ನೊಂದಿಗೆ ಹಾಗೂ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಧರ್ಮೋತ್ಥಾನ ಟ್ರಸ್ಟ್‌ನ ಸುರೇಂದ್ರ ಕುಮಾರ್‌ಅವರೊಂದಿಗೆ ಚರ್ಚಿಸಿ, ಕರ್ನಾಟಕದ ಎಲ್ಲ ಭಟ್ಟಾರಕರ ಮಾರ್ಗದರ್ಶನದಲ್ಲಿ, ತಮ್ಮ ಭಕ್ತ ವೃಂದದವರ ಅರ್ಥಿಕ ನೆರವಿನೊಂದಿಗೆ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡರು.
ಮೂಲಸ್ಥಳದಿಂದ ವಿಗ್ರಹವನ್ನು ಕನ್ನಂಬಾಡಿ ಹಿನ್ನೀರಿನ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ 14 ಅಡಿ ಎತ್ತರದ ವಿಶಾಲವಾದ ಕಾಂಕ್ರೀಟ್‌ನಿಂದ ಸುಂದರವಾದ ವೇದಿಕೆ ನಿರ್ಮಾಣ ಮಾಡಿ, ಪೂರ್ವಾಭಿಮುಖವಾಗಿ ಬಾಹುಬಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ನ.23ರಂದು ಭಗವಾನ್ ಬಾಹುಬಲಿ ಸ್ವಾಮಿಯ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಸಿದ್ಧಚಕ್ರ ಆರಾಧನಾ ಕಾರ್ಯಕ್ರಮ ಆರಂಭಗೊಂಡಿದ್ದು, 25ರಂದು ಪೂರ್ಣಗೊಳ್ಳಲಿದೆ. ಕರ್ನಾಟಕ, ತಮಿಳುನಾಡಿನ ಎಲ್ಲ ಜೈನ ಮಠಗಳ ಭಟ್ಟಾರಕರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದ 4ನೇ ಪ್ರಮುಖ ಗೊಮ್ಮಟಮೂರ್ತಿ ಎಂಬ ಕೀರ್ತಿಗೆ ಪಾತ್ರನಾಗಿರುವ ಬಸ್ತಿಹೊಸಕೋಟೆಯ ಗೊಮ್ಮಟನ ಕ್ಷೇತ್ರದ ಅಭಿವೃದ್ಧಿಗೆ ಕಾಲ ಕೂಡಿಬಂದಿದ್ದು, ಕೆಆರ್‌ಎಸ್ ಹಿನ್ನೀರಿನಲ್ಲಿ ಹಲವಾರು ವರ್ಷಗಳ ಕಾಲ ಒಬ್ಬಂಟಿಯಾಗಿದ್ದ ಬಾಹುಬಲಿಗೆ ಕೊನೆಗೂ ಮುಕ್ತಿ ದೊರೆತಂತಾಗಿದೆ.
ವಿಷ್ಣುವರ್ಧನನ ಕಾಲದಲ್ಲಿ ನಿರ್ಮಿತವಾಗಿದ್ದ ಈ ಮೂರ್ತಿ ಇದ್ದ ಜಾಗ ಮಾಣಿಕ್ಯಪುರಿ ಎಂಬ ಹೆಸರು ಪಡೆದಿತ್ತು. ಕನ್ನಂಬಾಡಿ ಕಟ್ಟೆಯ ನಿರ್ಮಾಣದ ನಂತರ ಮಾಣಿಕ್ಯಪುರಿ ಮುಳುಗಡೆಯಾಯಿತು. ಇಲ್ಲಿದ್ದ ನಿವಾಸಿಗಳು ಬಾಹುಬಲಿ ಮೂರ್ತಿ ಇರುವ ಸ್ಥಳದಿಂದ ಒಂದು ಕಿ.ಮೀ ದೂರದಲ್ಲಿ ಬಸ್ತಿ ಹೊಸಕೋಟೆ, ಕುರುಬರ ಬಸ್ತಿ ಊರು ಕಟ್ಟಿಕೊಂಡರು. ಕ್ರಮೇಣ ಅಲ್ಲಿದ್ದ ವಿಗ್ರಹಗಳು, ಜಿನಮಂಟಪಗಳು ಶಿಥಲಗೊಂಡಿದ್ದವು. ಸ್ಥಳೀಯ ಗ್ರಾಮಸ್ಥರು ಮಾತ್ರ ಶ್ರವಣಪ್ಪ ಎಂದು ಕರೆಯುವ ಮೂಲಕ ಮೂರ್ತಿಯ ಸಂರಕ್ಷಣೆ ಮಾಡಿಕೊಂಡು ಬಂದಿದ್ದರು.
ಕೆ.ಆರ್.ಪೇಟೆಯಿಂದ ಸಮೂರು 20 ಕಿ.ಮೀ, ಪಾಂಡವಪುರದಿಂದ 30 ಕಿ.ಮೀ, ಬೂಕನಕೆರೆಯಿಂದ 8 ಕಿ.ಮೀ ಅಂತರದಲ್ಲಿ ಈ ಕ್ಷೇತ್ರವಿದೆ