ಬಾಳೆಹೊಳೆ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವ

kls ratha
ಕಳಸ ತಾಲೂಕಿನ ಬಾಳೆಹೊಳೆ ಶ್ರೀ ಚನ್ನಕೇಶವ ಸ್ವಾಮಿ ಮತ್ತು ಪರಿವಾರ ದೇವರ ರಥೋತ್ಸವ ನಡೆಯಿತು.
Published on

ಕಳಸ: ಬಾಳೆಹೊಳೆ ಶ್ರೀ ಚನ್ನಕೇಶವ ಸ್ವಾಮಿ ಮತ್ತು ಪರಿವಾರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ರಥೋತ್ಸವ ಶುಕ್ರವಾರ ನಡೆಯಿತು.

ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಬುಧವಾರ ಫಲಸಮರ್ಪಣೆ, ಗುರುಪ್ರಾರ್ಥನೆ, ಗಣಪತಿಪೂಜೆ, ಪುಣ್ಯಾಹ, ನಾಂದಿ, ಋತ್ವಿಗ್ವರಣೆ, ಬಿಂಬಶುದ್ಧಿ ಹೋಮ, ಬಿಂಬಶುದ್ಧಿ ಕಲಶ ಸ್ಥಾಪನೆ, ಸಂಜೆ 5.30ರಿಂದ ಸ್ಥಾನಶುದ್ಧಿ, ಪ್ರಸಾದ ಶುದ್ಧಿ, ವಾಸ್ತುರಾಕ್ಷೋಘ್ನ ಹೋಮ, ವಾಸ್ತುಪೂಜೆ, ಬಲಿ ಕಲಾಸಂಕೋಚ, ಬಿಂಬಶುದ್ಧಿ, ನೇತ್ರೋನ್ಮಿಲನ, ಶಯ್ಯಕಲ್ಪನ ನೆರವೇರಿಸಲಾಯಿತು.

ಗುರುವಾರ ಗುರುಪ್ರಾರ್ಥನೆ, ಪುಣ್ಯಾಹ, ಪ್ರತಿಷ್ಠಾಧಿವಾಸಹೋಮ, ನಪುಂಸಕಶಿಲಾಧಿವಾಸ ಹೋಮ, ಅಷ್ಟಬಂಧ ಹೋಮ, ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ಚನ್ನಕೇಶವಸ್ವಾಮಿಯ ಬಿಂಬ ಪ್ರತಿಷ್ಠಾಪನೆ, ಅಷ್ಠಬಂಧ ಸಂಯೋಜನೆ, ಪ್ರಾಣಪ್ರತಿಷ್ಠೆ, ಸಾಯಂಕಾಲ ಕಲಾತತ್ವಹೋಮ, ತತ್ವಕಲಶಾಭಿಷೇಕ, 108 ಬ್ರಹ್ಮಕುಂಭ ಪ್ರತಿಷ್ಠೆ, ಆಧಿವಾಸ ಹೋಮಗಳು ನೆರವೇರಿಸಲಾಯಿತು.

ಶುಕ್ರವಾರ ಬೆಳಗ್ಗೆ 108 ಬ್ರಹ್ಮಕುಂಭಾಭಿಷೇಕ, ಮಧ್ಯಾಹ್ನ ರಥಾರೋಹಣ, ರಥೋತ್ಸವ ನಡೆಯಿತು. ಶ್ರೀ ದೇವರ ಸುತ್ತು ಸೇವೆ ಮಂಗಳಾರತಿ ಬಳಿಕ ಚನ್ನಕೇಶವ ದೇವರ ವಿಗ್ರಹವನ್ನು ಸಿಂಗಾರಗೊಂಡ ಬ್ರಹ್ಮ ರಥದಲ್ಲಿ ಇಟ್ಟು ಪೂಜಿಸಿ ರಥಾರೋಹಣ ನಡೆಸಲಾಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಹರಕೆಯಂತೆ ಕಾಳುಮೆಣಸು, ಏಲಕ್ಕಿ, ಅಡಕೆ, ಕಾಫಿ ಬೀಜ ಇತ್ಯಾದಿ ದವಸ ಧಾನ್ಯಗಳನ್ನು ರಥಕ್ಕೆ ಎಸೆದು ಪ್ರಾರ್ಥಿಸಿದರು. ಭಕ್ತರ ಜಯಘೋಷಗಳೊಂದಿಗೆ ರಥೋತ್ಸವ ನಡೆಯಿತು.

ಸಂಜೆ ಧಾರ್ಮಿಕ ಸಭೆ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರು ಗೆಜ್ಜೆನಾದ ತಂಡದಿಂದ ನೃತ್ಯರೂಪಕ ನಡೆಯಿತು. ಬಾಳೆಹೊಳೆ, ಕಳಸ, ಬಸ್ರಿಕಟ್ಟೆ, ಹೊರನಾಡು, ಹಳುವಳ್ಳಿ, ಮುನ್ನೂರುಪಾಲ್, ತನೂಡಿ, ಹಿರೇಬೈಲು ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net