

ಬಾಳೆಹೊನ್ನೂರು: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಟರಿ ಕ್ಲಬ್ನಿಂದ ನಿರ್ವಿುಸುತ್ತಿರುವ ಡಯಾಲಿಸಿಸ್ ಘಟಕಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಅನುದಾನ ಹಾಗೂ ನನ್ನ ವೈಯಕ್ತಿಕವಾಗಿಯೂ ಇದಕ್ಕೆ ಧನ ಸಹಾಯ ನೀಡುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.
ಪಟ್ಟಣದ ಆರೋಗ್ಯ ಕೇಂದ್ರದ ಆವರಣದಲ್ಲಿ ರೋಟರಿ ಕ್ಲಬ್ನಿಂದ ನಿರ್ವಿುಸುತ್ತಿರುವ ಡಯಾಲಿಸಿಸ್ ಘಟಕಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಆರೋಗ್ಯ ಕೇಂದ್ರ 30 ಬೆಡ್ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲಿದೆ. ಕರೊನಾ ನಿರ್ವಹಣೆ ಸಂಬಂಧ ರೋಟರಿ, ಜೇಸಿ, ಲಯನ್ಸ್ ಕ್ಲಬ್ಗಳು ಸಹ ಅಗತ್ಯ ಸಹಕಾರ ನೀಡಬೇಕು. ಈ ಬಗ್ಗೆ ನಾನು ವಿಧಾನಸಭೆಯಲ್ಲೂ ಈ ಹಿಂದೆ ಪ್ರಸ್ತಾಪ ಮಾಡಿದ್ದೇನೆ. ಸಾಮಾಜಿಕ ಕಳಕಳಿಯುಳ್ಳ ಎನ್ಜಿಒಗಳ ಸಲಹೆ, ಸಹಕಾರ ಪಡೆಯುವಂತೆ ಸರ್ಕಾರವನ್ನು ಕೋರಿದ್ದೇನೆ ಎಂದರು.
ಆರೋಗ್ಯ ಕೇಂದ್ರಕ್ಕೆ 20 ಲಕ್ಷ ರೂ. ವೆಚ್ಚದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರವನ್ನೂ ರೋಟರಿ ನೀಡಲು ಮುಂದಾಗಿದೆ. ಇದಕ್ಕೆ ನನ್ನ ಸಹೋದರನಿಂದ ಸೂಕ್ತ ನೆರವು ನೀಡುವಂತೆ ಕೋರಿದ್ದೇನೆ. ಜತೆಗೆ ಬಾಳೆಹೊನ್ನೂರು ಹಾಗೂ ಜೇನುಗದ್ದೆ ಆರೋಗ್ಯ ಕೇಂದ್ರಕ್ಕೆ ಬೇಕಾಗಿರುವ ಪೋರ್ಟಬಲ್ ಡಿಜಿಟಲ್ ಎಕ್ಸ್-ರೇ ಯಂತ್ರವನ್ನು ನೀಡಲು 6 ಲಕ್ಷ ರೂ. ಹಣವನ್ನು ಖಾಂಡ್ಯ ಪ್ಲಾಂಟರ್ಸ್ ಕ್ಲಬ್ ಸಂಗ್ರಹಿಸಿದ್ದು, ಯಂತ್ರವನ್ನು ಶೀಘ್ರ ಹಸ್ತಾಂತರಿಸಲಾಗುವುದು ಎಂದರು.