ಬಾಳೆಹೊನ್ನೂರಿನಲ್ಲಿ ವೇಷಧಾರಿಗಳಿಂದ ಕಳೆ

bhr huli
ಬಾಳೆಹೊನ್ನೂರಿನಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಮನೆ ಮನೆಗೆ ತೆರಳಿ ನರ್ತಿಸುತ್ತಿರುವ ಸ್ಥಳೀಯ ಯುವಕರ ಹುಲಿವೇಷದ ತಂಡ.
Published on

ಬಾಳೆಹೊನ್ನೂರು: ಹೋಬಳಿಯಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಕಳೆಗಟ್ಟಿದ್ದು, ಹಬ್ಬ ಆಚರಣೆಗೆ ಭರದ ಸಿದ್ಧತೆ ನಡೆದಿದೆ.

ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಪಟಾಕಿ ಅಂಗಡಿಗಳನ್ನು ತೆರೆದು ಮೂರ‌್ನಾಲ್ಕು ದಿನಗಳಿಂದ ವ್ಯಾಪಾರ ಮಾಡುತ್ತಿದ್ದಾರೆ.

ಹದಿನೈದು ದಿನಗಳ ಹಿಂದಿನಿಂದಲೇ ಪಟ್ಟಣದ ಸುತ್ತಮುತ್ತ ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಂಪ್ರದಾಯಿಕ ಹುಲಿವೇಷ, ಸಿಂಹವೇಷಧಾರಿಗಳು, ಬಯಲುಸೀಮೆಯ ರಾಮ, ಲಕ್ಷ್ಮಣ, ಹನುಮಂತರ ತಂಡ ಆಗಮಿಸಿದ್ದು, ಮನೆ ಮನೆಗೆ ಭೇಟಿ ನೀಡಿ ಮನರಂಜನೆ ನೀಡುತ್ತಿದೆ.

ವಿವಿಧೆಡೆಯಿಂದ ಬಂದಿರುವ ಸಾಂಪ್ರದಾಯಿಕ ವೇಷಧಾರಿಗಳು, ಸ್ಥಳೀಯ ಯುವಕರ ಕರಡಿಕುಣಿತ, ಕೊರಗನ ನೃತ್ಯ ಹಾಗೂ ಗ್ರಾಮೀಣ ಪ್ರದೇಶದವರ ಅಂಟಿಕೆ ಪಂಟಿಕೆ, ತಂಬೂರಿ ಹಾಡು, ಕೋಲಾಟ, ಜನಪದ ಹಾಡಿನ ಕಾರ್ಯಕ್ರಮಗಳು ಎಲ್ಲ ಭಾಗಗಳಲ್ಲಿ ನಡೆಯುತ್ತಿವೆ.

ಗ್ರಾಮೀಣ ಭಾಗಗಳಲ್ಲಿ ಭಾನುವಾರ ಹಂಡೆಗೆ ನೀರು ತುಂಬುವುದರೊಂದಿಗೆ ದೀಪಾವಳಿ ಆಚರಣೆಗೆ ವಿಧ್ಯುಕ್ತ ಚಾಲನೆ ದೊರೆತಿದೆ. ಮಲೆನಾಡು ಭಾಗದಲ್ಲಿ ನೀರು ತುಂಬುವ ಹಬ್ಬದ ಅಂಗವಾಗಿ ಸ್ನಾನದ ಹಂಡೆ, ಬಚ್ಚಲು ಮನೆಗಳನ್ನು ಮನೆ ಮಂದಿಯೆಲ್ಲ ಸೇರಿ ಸ್ವಚ್ಛಗೊಳಿಸಿ ಸ್ನಾನ ಮಾಡುವ ಹಂಡೆಗೆ ಜೇಡಿ, ಕೆಮ್ಮಣ್ಣಿನ ಚಿತ್ತಾರ ಬರೆದು, ಹಿಂಡ್ಲೆ ಕಾಯಿ ಬೀಳು, ತಳಿರು ತೋರಣ, ಚೆಂಡು ಹೂವಿನ ಮಾಲೆ ಹಾಕಿ ಶೃಂಗರಿಸಿದ್ದಾರೆ.

ಸೋಮವಾರ ಮುಂಜಾನೆ ಅಭ್ಯಂಜನ ಸ್ನಾನ ಹಾಗೂ ಮಲೆನಾಡಿನ ಸಂಪ್ರದಾಯದಂತೆ ಮುಂಡುಗ (ಹೂ) ಹಾಕುವ ಕಾರ್ಯ ನಡೆಯಲಿದೆ. ಈ ಬಾರಿ ಸೋಮವಾರ ಹಾಗೂ ಮಂಗಳವಾರ ದಿನ ಅಮಾವಾಸ್ಯೆಯು ಬಂದಿರುವುದರಿಂದ ಎರಡು ದಿನಗಳ ಕಾಲ ಪಟ್ಟಣದ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಲಿದೆ. ಲಕ್ಷ್ಮೀ ಪೂಜೆಗೆ ಅಂಗಡಿ ಮುಂಗಟ್ಟುಗಳ ಸ್ವಚ್ಛತಾ ಕಾರ್ಯ, ಸುಣ್ಣಬಣ್ಣವೂ ಬಿರುಸಿನಿಂದ ನಡೆಯುತ್ತಿದೆ. ಬುಧವಾರ ಗೋಪೂಜೆ, ಬಲಿಪಾಡ್ಯಮಿ ನಡೆಯಲಿದೆ.

ಬಾಳೆಹೊನ್ನೂರು ಮುಖ್ಯರಸ್ತೆಯಲ್ಲಿ ಭಾನುವಾರ ವಿವಿಧೆಡೆಯಿಂದ ಬಂದಿರುವ ಹೂ ಮಾರಾಟಗಾರರು ಅಂಗಡಿಗಳನ್ನು ತೆರೆದಿದ್ದು, ಚೆಂಡು ಹೂ, ಸೇವಂತಿಗೆ ಹೂವುಗಳ ಮಾರಾಟ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net