

ಶೃಂಗೇರಿ: ನೀಲಗಿರಿ ಸಸಿ ಬಾನೆತ್ತರಕ್ಕೆ ಬೆಳೆದು ಮರವಾಗುತ್ತದೆ. ಅದರ ಬುಡದಲ್ಲಿ ಗರಿಕೆಯೂ ಬೆಳೆಯಲು ಅವಕಾಶ ನೀಡುವುದಿಲ್ಲ. ಆದರೆ ಬಾಳೆಗಿಡ ಮತ್ತೊಂದು ಗಿಡವನ್ನು ಬೆಳೆಸುತ್ತದೆ. ನಾವು ಸಮಾಜದಲ್ಲಿ ಬಾಳೆಗಿಡದಂತೆ ಮತ್ತೊಬ್ಬರನ್ನು ಬೆಳೆಸುವ ಭಾವ ಹೊಂದಬೇಕು.ಆಗ ಮಾತ್ರ ಮುಂದಿನ ತಲೆಮಾರಿಗೆ ಅತ್ಯುನ್ನತ ಮೌಲ್ಯ ನೀಡಲು ಸಾಧ್ಯ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಜೆಸಿಐ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿ, ಭಾರತದಲ್ಲಿ ಸ್ವಾತಂತ್ರೃಪೂರ್ವದಲ್ಲಿ ವಿದ್ಯಾವಂತರ ಸಂಖ್ಯೆ ಶೇ.13ರಷ್ಟಿತ್ತು. ಪ್ರಸ್ತುತ ವಿದ್ಯಾವಂತರ ಸಂಖ್ಯೆ ಶೇ.99ರಷ್ಟಿದೆ. ಆದರೆ ಅಪರಾಧದ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಸರ್ಕಾರಕ್ಕೆ ಉದ್ಯೋಗ ನೀಡುವ ಶಕ್ತಿ ಶೇ.1 ರಷ್ಟಿದೆ. ಉಳಿದ ಶೇ.99ರಷ್ಟು ಉದ್ಯೋಗವನ್ನು ಖಾಸಗಿ ಸಂಸ್ಥೆಗಳು ನೀಡುವ ಸ್ಥಿತಿ ಇದೆ ಎಂದರು.
ಶಿಕ್ಷಣ, ಆರೋಗ್ಯ, ಸಾಮಾಜಿಕ ಕ್ಷೇತ್ರಗಳಲ್ಲಿ ಹಿರಿಯರು ನೀಡಿದ ನಿಸ್ವಾರ್ಥಸೇವೆಯನ್ನು ನಾವು ಮುಂದುವರಿಸಬೇಕು. ಸರ್ಕಾರದ ಜತೆ ಸಂಘ-ಸಂಸ್ಥೆಗಳು ಸೇರಿಕೊಂಡು ಭಾರತದ ಉನ್ನತಿಗಾಗಿ ಪರಿಶ್ರಮಿಸಬೇಕು ಎಂದರು.
ಅಮ್ಮ ೌಂಡೇಶನ್ ಸಂಸ್ಥಾಪಕ ಸುಧಾಕರ ಶೆಟ್ಟಿ ಮಾತನಾಡಿ, ಜೀವನದ ಪರಿಪೂರ್ಣತೆಗೆ ಯುವಪೀಳಿಗೆಗೆ 18ರಿಂದ 40ವರ್ಷಗಳ ತನಕ ಉತ್ತಮ ಅವಕಾಶ ಇರುತ್ತದೆ. ಜೀವನದಲ್ಲಿ ಆತ್ಮವಿಶ್ವಾಸ ಇದ್ದರೆ ಮಾತ್ರ ಅತ್ಯುನ್ನತ ಬದುಕು ಕಟ್ಟಲು ಸಾಧ್ಯ. ಗುರಿ ಮತ್ತು ಛಲವಿದ್ದಾಗ ಮಾತ್ರ ನಾವು ಗೆಲುವಿನ ಹಾದಿಯಲ್ಲಿ ಸಾಗಲು ಸಾಧ್ಯ ಎಂದರು.
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ಜೆಸಿಐ ಅಧ್ಯಕ್ಷ ವಿ.ಎಸ್.ಅಶೋಕ್, ಕಾರ್ಯದರ್ಶಿ ಅನ್ವಿತ್ ಕಾಮತ್, ಮಾಜಿ ಅಧ್ಯಕ್ಷ ಎಚ್.ಜಿ.ರಾಘವೇಂದ್ರ, ಕಾರ್ಯಕ್ರಮ ಸಂಯೋಜಕ ರಮೇಶ್ ಶೂನ್ಯ ಇದ್ದರು.