

ಕಂಪ್ಲಿ: ಆಲಿಕಲ್ಲು ಮಳೆ, ಗಾಳಿಗೆ ಬೆಳೆಗಳು ಹಾನಿಯಾಗಿದ್ದು, ನಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಜಿ.ಕಾರ್ತೀಕ್ ಬಣ) ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರ್ ಎಸ್.ಶಿವರಾಜಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ಬೆಳೆಗಳಿಗೆ ರೋಗ ರುಜಿನ, ದರ ಕುಸಿತ, ಕೃಷಿ ನಿರ್ವಹಣೆ ವೆಚ್ಚ ಏರಿಕೆ ಮೊದಲಾದ ಕಾರಣಗಳಿಂದಾಗಿ ರೈತರು ನಿರಂತರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶನಿವಾರ ಸಂಜೆ ಸುರಿದ ಆಲಿಕಲ್ಲು ಮಳೆ, ಬಿರುಗಾಳಿಗೆ ಭತ್ತದ ಕಾಳು ಉದುರಿ, ಬಾಳೆ ಗಿಡ ಮುರಿದು ಬಿದ್ದಿವೆ.
ಈ ಹಿನ್ನಲೆಯಲ್ಲಿ ಕೂಡಲೇ ಕಂದಾಯ, ತೋಟಗಾರಿಕೆ, ಕೃಷಿ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ, ಎಕರೆ ಭತ್ತಕ್ಕೆ 35 ಸಾವಿರ ರೂ., ಬಾಳೆಗೆ ಒಂದು ಲಕ್ಷ ರೂ. ಪರಿಹಾರ ಕೊಡಬೇಕು. ರೈತರಿಗೆ ಉಚಿತವಾಗಿ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ ಒದಗಿಸಬೇಕು. ಬೆಳೆ ವಿಮೆ ಮಾಡಿಸಿಕೊಂಡ ರೈತರಿಗೆ ನಿಯಮ ಸಡಿಲಿಸಿ ಬೆಳೆ ವಿಮೆ ನಷ್ಟ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.