ಬಾಳೆ ಮಾರಾಟದ ಬೆಲೆ ಪಾರದರ್ಶಕವಾಗಿರಲಿ

19Rajesh4
Published on

ಚಾಮರಾಜನಗರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಬಾಳೆ ಗೊನೆ ಮಾರಾಟ ಮಾಡುವಾಗ ರೈತರಿಗೆ ಮೋಸವಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಂಗಳವಾರ ಸಭೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರು ಮತ್ತು ಎಪಿಎಂಸಿ ವ್ಯಾಪಾರಿಗಳೊಂದಿಗೆ ಚರ್ಚೆ ನಡೆಸಿದ ಡಿಸಿ ಶಿಲ್ಪಾನಾಗ್ ಆ.28ಕ್ಕೆ ಮತ್ತೊಂದು ಸಭೆ ಕರೆದು ಸಮಸ್ಯೆಗಳನ್ನು ಇತ್ಯರ್ಥಗೊಳಿಸಿರಬೇಕೆಂದು ಸೂಚನೆ ನೀಡಿದರು. ಇದಕ್ಕೂ ಮೊದಲು ರೈತ ಮುಖಂಡರು ಮಾತನಾಡಿ, ಎಪಿಎಂಸಿಯಲ್ಲಿ ವ್ಯಾಪಾರಿಗಳು ಅಧಿಕ ತೂಕದ ಬಾಳೆ ಗೊನೆಯನ್ನು ಪ್ರಥಮ ದರ್ಜೆ, 5 ಕೆ.ಜಿಗಿಂತ ಕಡಿಮೆ ತೂಕದ ಬಾಳೆ ಗೊನೆಯನ್ನು ದ್ವಿತೀಯ ದರ್ಜೆಯ ಸ್ಥಾನದಲ್ಲಿ ನೋಡಲಾಗುತ್ತದೆ. ಗೊನೆಯ ತೂಕವನ್ನು ಕಳೆದು, ದ್ವಿತೀಯ ದರ್ಜೆಯ ಗೊನೆ ಎಂಬ ಕಾರಣವನ್ನೊಡ್ಡಿ ಕಡಿಮೆ ಹಣ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ಲೈಸೆನ್ಸ್ ಇಲ್ಲವರ ಮೇಲೆ ಕ್ರಮಕೈಗೊಳ್ಳಿ. ತರಕಾರಿ ಖರೀದಿಗೆ ಎಷ್ಟು ಕಮಿಷನ್ ಪಡೆದುಕೊಳ್ಳುತ್ತಾರೆ ತಿಳಿಸಿ. ಮುಂಗಾರಿನಲ್ಲಿ ಬಾಳೆ ಬೆಳೆ ನಷ್ಟವಾಗಿದೆ. ಇದನ್ನು ಸಲ್ ಭೀಮಾ ಯೋಜನೆಗೆ ಸೇರಿಸಬೇಕೆಂದು ಎಂದು ಒತ್ತಾಯ ಮಾಡಿದರು.

ಎಪಿಎಂಸಿ ನಿರ್ದೇಶಕ ವೆಂಕಟರಾವ್ ಮಾತನಾಡಿ, ರೈತರಿಂದಲೇ ವ್ಯಾಪಾರಿಗಳು ಇರುವುದು. ರೈತರಿಗೆ ವರ್ತಕರು ಸಹಕಾರ ನೀಡುತ್ತಿದ್ದು, ಆ.28ರೊಳಗೆ ವರ್ತಕರು ಸಭೆ ಕರೆದು ಸಮಸ್ಯೆಗಳಿದ್ದರೆ ಬಗೆಹರಿಸಲು ಚರ್ಚೆ ಮಾಡಿ ತಿಳಿಸುತ್ತಾರೆ ಎಂದು ಹೇಳಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಮಾರುಕಟ್ಟೆಯಲ್ಲಿ ಪಾರದರ್ಶಕ ಬೆಲೆಯನ್ನು ನಿಗದಿ ಮಾಡಬೇಕು. ಎಪಿಎಂಸಿ ಅಧಿಕಾರಿಗಳಿಗೆ ಯಾವುದೇ ಒತ್ತಡ ಬಂದರೂ ನಮಗೆ ತಿಳಿಸಿ ನಾವು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ. ಅನಧಿಕೃತವಾಗಿ ವ್ಯಾಪಾರಿಗಳು ಕೆಲಸ ಮಾಡಬಾರದು. ಲೈಸೆನ್ಸ್ ಇಲ್ಲವರು ಕಂಡುಬಂದರೆ ಅವರ ವಿರುದ್ಧ ಕೇಸ್ ಮಾಡಲು ಎಪಿಎಂಸಿ ಉಪ ನಿರ್ದೇಶಕ ಬಸವಣ್ಣ ಅವರಿಗೆ ಸೂಚನೆ ನೀಡಿ ಆ.28ರಂದು ಮತ್ತೊಂದು ಸಭೆ ನಿಗದಿ ಮಾಡಲಾಗಿದ್ದು, ಈ ಸಭೆಯಲ್ಲಿ ಮಾರುಕಟ್ಟೆಯಲ್ಲಿರುವ ಎಲ್ಲ ಸಮಸ್ಯೆಗಳು ಬಗೆಹರಿಯಬೇಕೆಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ, ರೈತ ಮುಖಂಡರಾದ ಹೆಗ್ಗೋಠಾರ ವಿಜಯ್‌ಕುಮಾರ್, ಹೆಬ್ಬಸೂರು ಬಸವಣ್ಣ, ಹೆಬ್ಬಸೂರು ಬಸವಣ್ಣ, ಕೊಳ್ಳೇಗಾಲ ಶೈಲೇಂದ್ರ, ಮೂಕಳ್ಳಿ ಮಹದೇವಸ್ವಾಮಿ, ಗುಂಡ್ಲುಪೇಟೆ ಪುಟ್ಟೇಗೌಡ, ವೀರನಪುರ ನಾಗಪ್ಪ, ಪಟೇಲ್ ಶಿವಮೂರ್ತಿ ಮತ್ತು ಎಪಿಎಂಸಿ ಅಧ್ಯಕ್ಷ ಸೋಮೇಶ್ ಮತ್ತು ವ್ಯಾಪಾರಿಗಳು ಇದ್ದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಖರೀದಿ ಮಾಡುವ ಪ್ರತಿ ಬೆಳೆಯ ಆಯಾ ದಿನದ ದರವನ್ನು ಬೋರ್ಡ್ ಹಾಕಿ ಪ್ರದರ್ಶನ ಮಾಡಬೇಕು. ಬಾಳೆ ಖರೀದಿ ವೇಳೆ ದ್ವಿತೀಯ ದರ್ಜೆಯ ಗೊನೆ ಎಂದು ಕಡೆಗಣಿಸದೆ ಸೂಕ್ತ ಬೆಲೆಯನ್ನು ನೀಡಬೇಕೆಂದು ಒತ್ತಾಯಿಸುತ್ತೇನೆ. ಹೆಗ್ಗವಾಡಿಪುರ ಮಹೇಶ್‌ಕುಮಾರ್, ರೈತ ಮುಖಂಡ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net