ಬಾಳೆ ಬೆಳೆ ಹಣದಲ್ಲಿ ಗೋಲ್‌ಮಾಲ್

2
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಗ್ರಾಮೀಣ ನಿರುದ್ಯೋಗಿಗಳ ಪಾಲಿನ ಅಕ್ಷಯ ಪಾತ್ರೆ ನರೇಗಾ ಯೋಜನೆ ದುರ್ಬಳಕೆ ಬಗ್ಗೆ ಆಗಾಗ ಆರೋಪಗಳು ಕೇಳಿ ಬರುತ್ತಲೇ ಇವೆ. ಇದೀಗ ಈ ಸಾಲಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಬಾಳೆ ಬೆಳೆಗೆ ನೀಡಲಾಗುವ ಹಣದಲ್ಲೂ ಭಾರೀ ಪ್ರಮಾಣದಲ್ಲಿ ಗೋಲ್‌ಮಾಲ್ ನಡೆಯುತ್ತಿದೆ ಎನ್ನುವ ಆರೋಪಗಳು ವ್ಯಾಪಕವಾಗಿದ್ದು, ತೋಟಗಾರಿಕೆ ಇಲಾಖೆ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

ನರೇಗಾ ಅಡಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಅವಕಾಶ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿರುವ ಸರ್ಕಾರ ಪ್ರತಿ 2 ಎಕರೆಗೆ ಒಟ್ಟಾರೆ 1.70 ಲಕ್ಷ ರೂ. ನೀಡುತ್ತದೆ. ಇದರಲ್ಲಿ 1.03 ಲಕ್ಷ ರೂ. ಕೂಲಿ ಮೊತ್ತವಾಗಿ ಹಾಗೂ ಉಳಿಕೆ ಹಣವನ್ನು ಸಾಮಗ್ರಿ ವೆಚ್ಚವಾಗಿ ನೀಡುತ್ತದೆ. ಈ ಮೂಲಕ ರೈತ ಯಾವುದೇ ನಷ್ಟವಿಲ್ಲದೆ ಬಾಳೆ ಬೆಳೆಯಲು ಹಾಗೂ ಹೆಚ್ಚುವರಿ ಲಾಭಗಳಿಸಲು ಸಹಕಾರಿ ಆಗುತ್ತದೆ. ಇದರಿಂದ ಸಾಕಷ್ಟು ರೈತರು ಲಾಭವನ್ನೂ ಪಡೆದುಕೊಂಡಿದ್ದಾರೆ. ಆದರೆ, ಬಾಳೆ ಬೆಳೆಯುವ ಅವಕಾಶ ನರೇಗಾದಲ್ಲಿ ಲಭ್ಯವಾಗುತ್ತಿದ್ದಂತೆ ಇದನ್ನು ಹಣ ಮಾಡುವ ದಂಧೆಯಾಗಿಸಿಕೊಂಡಿರುವ ಕೆಲವರು ಬಾಳೆ ಬೆಳೆಯದೆ ಹಣ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಯಾರದ್ದೋ ಹೆಸರು?: ಕೆಲವು ಮಂದಿ ಬಾಳೆ ತೋಟಕ್ಕೆ ನರೇಗಾದಲ್ಲಿ ಹಣ ಕೊಡಿಸುತ್ತೇವೆ, ನಿಮ್ಮ ಜಮೀನಿನ ಪಹಣಿ ಮತ್ತು ನರೇಗಾ ಜಾಬ್‌ಕಾರ್ಡ್ ನೀಡಿದರೆ ಸಾಕು ಎಂದು ಹೇಳಿಕೊಂಡು ರೈತರನ್ನು ವಂಚಿಸುತ್ತಿದ್ದಾರೆ. ಇದರಲ್ಲಿ ಎರಡು ಎಕರೆಗೆ ಬರುವ ಒಟ್ಟು 1.70 ಲಕ್ಷ ರೂ.ಗಳಲ್ಲಿ 20-30 ಸಾವಿರ ರೂ.ಗಳನ್ನು ಜಮೀನಿನ ಮಾಲೀಕರಿಗೆ ನೀಡಿ, ಉಳಿಕೆ ಹಣವನ್ನು ಲಪಟಾಯಿಸುತ್ತಿದ್ದಾರೆ. ಇದರಲ್ಲಿ ಇಲಾಖೆ ಅಧಿಕಾರಿಗಳೂ ಶಾಮೀಲಾಗಿರುವುದು ಕಂಡು ಬಂದಿದ್ದು, ಇದರ ತನಿಖೆಗೆ ಪ್ರತ್ಯೇಕ ತಂಡವನ್ನೇ ರಚಿಸುವ ಮೂಲಕ ರೈತರ ಹೆಸರಲ್ಲಿ ಬಾಳೆ ನೆಡುವ ಮೋಸದಾಟಕ್ಕೆ ಬ್ರೇಕ್ ಹಾಕಬೇಕಿದೆ.

ನಡೆಯಬೇಕಿದೆ ತನಿಖೆ: ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಕಳೆದ ವರ್ಷದಿಂದ ಬಿತ್ತನೆ ಮಾಡಿರುವ ಬಾಳೆ ತೋಟಗಳ ಸ್ಥಳ ಪರೀಕ್ಷೆಯನ್ನು ಜಿಲ್ಲಾ ಪಂಚಾಯಿತಿ ಮಾಡಬೇಕಿದೆ. ಹಿಂದಿನ ವರ್ಷಗಳ ತೋಟಗಳು ಸ್ಥಳ ಪರಿಶೀಲನೆಗೆ ಸಿಗದೇ ಇದ್ದರೂ ಕನಿಷ್ಠ ಒಂದು ವರ್ಷದ ಒಳಗೆ ನಾಟಿ ಮಾಡಲಾದ ತೋಟಗಳು ಲಭ್ಯವಾಗಲೇಬೇಕಿದೆ. ಸ್ಥಳ ಪರಿಶೀಲನೆ ಮಾಡಿದರೆ ಖಂಡಿತವಾಗಿ ಯಾರೆಲ್ಲಾ ಸರ್ಕಾರಕ್ಕೆ ವಂಚಿಸಿ ಹಣ ಪಡೆದುಕೊಂಡಿದ್ದಾರೆ, ಇದರಲ್ಲಿ ಯಾರೆಲ್ಲಾ ಶಾಮೀಲಾಗಿದ್ದಾರೆ ಎನ್ನುವ ಮಾಹಿತಿ ಹೊರಬರಲಿದೆ.

ಜನಪ್ರತಿನಿಧಿಗಳಿಗೆ ಗೊತ್ತಿಲ್ಲವೇ?: ಬಾಳೆ ತೋಟ ಮಾಡುವ ಯೋಜನೆಯಲ್ಲಿ ಲಕ್ಷಾಂತರ ರೂ. ವಂಚನೆ ಆಗುತ್ತಿದೆ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಅದರಲ್ಲೂ ಚನ್ನಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಕೇಳಿ ಬರುತ್ತಲೇ ಇದೆ. ಆದರೆ, ಇದನ್ನು ನಿಯಂತ್ರಿಸಬೇಕಾದ ಮತ್ತು ಪರಿಶೀಲನೆ ಮಾಡಬೇಕಾದ ಜವಾಬ್ದಾರಿ ನಿಭಾಯಿಸಲು ಜನಪ್ರತಿನಿಧಿಗಳು ವಿಲರಾಗಿದ್ದಾರೆ ಎಂದರೆ ತಪ್ಪಾಗಲಾರದು. ಈ ಕೂಡಲೇ ಈ ಬಗ್ಗೆ ಜಿಲ್ಲೆಯ ಹಿರಿಯ ಅಧಿಕಾರಿಗಳ ಜತೆಗೆ ಜನಪ್ರತಿನಿಧಿಗಳು ಹೆಚ್ಚಿನ ಗಮನ ಹರಿಸಿ ನರೇಗಾದಲ್ಲಿ ಆಗುತ್ತಿರುವ ವಂಚನೆಯನ್ನು ತಪ್ಪಿಸಬೇಕಿದೆ.

ಈ ಬಗ್ಗೆ ನಮಗೂ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಮಾಡಲು ಈಗಾಗಲೇ ತಂಡ ರಚನೆ ಮಾಡಲಾಗಿದೆ. ಸೋಮವಾರದಿಂದ ಸ್ಥಳ ಪರಿಶೀಲನೆ ನಡೆಯಲಿದೆ. ಇತರ ಇಲಾಖೆಗಳನ್ನು ಒಳಗೊಂಡ ತಂಡಗಳನ್ನು ರಚನೆ ಮಾಡಲು ಜಿಪಂ ಸಿಇಒಗೆ ಮನವಿ ಮಾಡಲಾಗಿದೆ. ಮುನೇಗೌಡ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net