ಬಾಳೂರು-ಹೊರನಾಡು ರಸ್ತೆ ಗುಂಡಿಮಯ

MDG road
ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಸಂಪ್ಯ ಗ್ರಾಮದ ಹೊರನಾಡು ರಸ್ತೆಯಲ್ಲಿ ಗುಂಡಿಬಿದ್ದಿರುವುದು.
Published on

ಮೂಡಿಗೆರೆ: ಬಾಳೂರಿನಿಂದ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ತೆರಳುವ ರಸ್ತೆಯಲ್ಲಿ ವಿಪರೀತ ಗುಂಡಿಗಳು ಬಿದ್ದು ವಾಹನ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.

ಬಾಳೂರಿನಿಂದ ಹೊರನಾಡು ಗ್ರಾಮದವರೆಗೆ 50 ಕಿ.ಮೀ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಸಂಪ್ಯ ಗ್ರಾಮದಲ್ಲಿ ಈ ರಸ್ತೆಯ ಮಧ್ಯದಲ್ಲಿ ಬೃಹತ್ ಗಾತ್ರದ ಹೊಂಡವಾಗಿ ಹಲವಾರು ವಾಹನಗಳು ಗುಂಡಿಗೆ ಬಿದ್ದು ಜಖಂಗೊಂಡಿವೆ. ಬೈಕ್ ಸವಾರರು ಗುಂಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ರಸ್ತೆ ವಿಪರೀತ ಗುಂಡಿಯಾಗಿರುವ ಕಾರಣ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ. ಇದರಿಂದ ರೋಗಿಗಳು ಮತ್ತು ವಿದ್ಯಾರ್ಥಿಗಳು ಪರದಾಡಬೇಕಾಗಿದೆ. ಕಳಸ ಮತ್ತು ಮೂಡಿಗೆರೆಗೆ ಈ ಭಾಗದ ಸಾರ್ವಜನಿಕರು ಇದೇ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸಬೇಕಾಗಿದೆ. ಖಾಸಗಿ ವಾಹನಗಳು ಜಖಂಗೊಳ್ಳುವ ಭಯದಲ್ಲಿ ವಾಹನಗಳ ಮಾಲೀಕರು ಸಂಚರಿಸಲು ಹಿಂದೇಟು ಹಾಕುತ್ತಾರೆ.

ಕಳಸ, ಹೊರನಾಡು, ಕುದುರೆಮುಖ, ಉಡುಪಿ ಸೇರಿದಂತೆ ಬಹುತೇಕ ಕಡೆ ತೆರಳುವ ಪ್ರವಾಸಿಗರು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಪ್ರವಾಸಿಗರು ಮಾಹಿತಿಯಿಲ್ಲದೆ ವಾಹನಗಳನ್ನು ಏಕಾಏಕಿ ಮುನ್ನುಗ್ಗಿಸುವುದರಿಂದ ವಾಹನಗಳು ಗುಂಡಿಗೆ ಬಿದ್ದು ಜಖಂಗೊಳ್ಳುತ್ತಿವೆ.

ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಶಾಸಕಿ ನಯನಾ ಮೋಟಮ್ಮ ಅವರಿಗೆ ಕೆಳಗೂರಿನ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಪದಾಧಿಕಾರಿ ಶಿವರಾಜ್ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಶಾಸಕರು ಮುತುವರ್ಜಿ ವಹಿಸಿ ರಸ್ತೆ ಅಭಿವೃದ್ಧಿಗೊಳಿಸಬೇಕು. ಮಳೆ ಕ್ಷೀಣಿಸುವವರೆಗೆ ತಾತ್ಕಾಲಿಕವಾಗಿ ಅಧಿಕಾರಿಗಳು ಗುಂಡಿ ಮುಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net