

ಚಿತ್ರದುರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಹಯೋಗದಲ್ಲಿ ತಾಲೂಕಿನ ಸೀಬಾರ -ಗುತ್ತಿನಾಡು ವಿಶ್ವಮಾನವ ವಸತಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಬಾಲ್ಯವಿವಾಹ ವಿರುದ್ಧ ಜಾಗೃತಿ ಕಾರ‌್ಯಕ್ರಮ ನಡೆಯಿತು.
ಬಾಲ್ಯ ವಿವಾಹ ನಿಷೇಧ, ಬಾಲ ಕಾರ್ಮಿಕ ನಿಷೇಧ, ಪೋಕ್ಸೋ ಹಾಗೂ ಬಾಲ ತಾಯಂದಿರು, ಮಕ್ಕಳ ಹಕ್ಕುಗಳು, ಮಕ್ಕಳ ಅಪಹರಣ, ಸುರಕ್ಷಿತ ಸ್ಪರ್ಶ ಹಾಗೂ ಅಸುರಕ್ಷಿತ ಸ್ಪರ್ಶಗಳ ಕುರಿತು ಸಂಪನ್ಮೂಲ ವ್ಯಕ್ತಿ ಡಿ.ಗೀತಾ ಮಾತನಾಡಿದರು.
ಬಾಲ್ಯ ವಿವಾಹ ಎಂಬುದೊಂದು ಸಾಮಾಜಿಕ ಪಿಡುಗಾಗಿದೆ. ಅದರಿಂದ ಆಗುವ ಅನಾನುಕೂಲತೆಗಳು, ಬಾಲ್ಯವಿವಾಹ ತಡೆಗೆ ಮಕ್ಕಳು, ಪಾಲಕರು ಹಾಗೂ ಶಿಕ್ಷಕರ ಜವಾಬ್ದಾರಿಗಳನ್ನು ಕುರಿತು ಭರಮಸಾಗರ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಪುಷ್ಪಾ ಮಾಹಿತಿ ನೀಡಿದರು.
ಮಕ್ಕಳ ಸಹಾಯವಾಣಿ ಸಂಖ್ಯೆ 1098ರೆಡೆ ಜಾಗೃತಿ ಮೂಡಿಸಲಾಯಿತು. ವಿಶ್ವ ಮಾನವ ಶಿಕ್ಷಣ ಸಂಸ್ಥೆಯ ನೀಲಕಂಠ ದೇವರು, ಜಲೀಲ್‌ಸಾಬ್, ಪ್ರಾಚಾರ್ಯೆ ಸುಧಾ, ಜಿಲ್ಲಾ ಸಂಯೋಜಕ ಚೇತನ್ ಮತ್ತಿತರರು ಇದ್ದರು.