ಬಾಲ್ಯವಿವಾಹಮುಕ್ತ ಗ್ರಾಮ ಪಂಚಾಯಿತಿಗೆ ಬಹುಮಾನ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

16manju3
Published on

ಬೆಳಗಾವಿ: ಸಮಾಜಕ್ಕೆ ಮಾರಕವಾಗಿರುವ ಬಾಲ್ಯವಿವಾಹಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮ ವಹಿಸಿದ್ದು, ಬಾಲ್ಯವಿವಾಹಮುಕ್ತ ಗ್ರಾಮ ಪಂಚಾಯಿತಿಗೆ 25 ಸಾವಿರ ರೂ. ಬಹುಮಾನ ನೀಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಿಸಿದರು.

ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೋಷಣ ಮಾಸಾಚರಣೆ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಅಂಗವಿಕಲ ಫಲಾನುಭವಿಗಳಿಗೆ ಸಾಧನ, ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆಯರು ಬಾಲ್ಯವಿವಾಹ ಕುರಿತು ನಿರ್ಭೀತಿಯಿಂದ ಸಂಬಂಧಿತರಿಗೆ ಮಾಹಿತಿ ಕೊಡಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ಬೇರು ಸಮೇತ ಕಿತ್ತು ಹಾಕಲು ಸನ್ನದ್ಧರಾಗಿ.

ಲ್ಯವಿವಾಹ, ಲೈಂಗಿಕ ದೌರ್ಜನ್ಯ ಮತ್ತು ಅನ್ಯಾಯವಾದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಹೇಳಿದರು. ಬೆಳಗಾವಿ ಮಾತ್ರವಲ್ಲ ರಾಜ್ಯದ ಎಲ್ಲ ಗ್ರಾಪಂ ಮಟ್ಟದಲ್ಲೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಸಲಿದ್ದೇವೆ. ಸದೃಢ ಸಮಾಜ ನಿರ್ಮಿಸುವುದೇ ಇಲಾಖೆ ಗುರಿ. ಪೌಷ್ಟಿಕ ಮತ್ತು ತೀವ್ರ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸಿ, ಆರೋಗ್ಯವಂತ ಮಕ್ಕಳನ್ನು ರೂಪಿಸಲು ಸಿದ್ಧರಾಗಬೇಕು ಎಂದರು.

ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕರಿಗೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಎಸಿಡಿಪಿಒ) ಹುದ್ದೆಗೆ ಬಡ್ತಿ ಕೊಡಲು ಪ್ರಯತ್ನಿಸುತ್ತಿದ್ದೇನೆ. 400 ಅಂಗನವಾಡಿ ಮೇಲ್ವಿಚಾರಕರ ಹುದ್ದೆಗೆ ಒಂದೇ ಬಾರಿ ಸೇವಾಬಡ್ತಿ ನೀಡುವ ಕುರಿತು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವ ಮೂಲಕ ಸಚಿವೆ ಹೆಬ್ಬಾಳ್ಕರ್ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದಾರೆ. ಅಂಗವಿಕಲರಿಗೆ ಹೊಲಿಗೆ ಯಂತ್ರ, ಬ್ಯಾಟರಿಚಾಲಿತ ವೀಲ್‌ಚೇರ್, ಬ್ರೈಲ್‌ಕಿಟ್, ಟಾಕಿಂಗ್ ಲ್ಯಾಪ್‌ಟಾಪ್ ಹಾಗೂ ದ್ವಿಚಕ್ರ ವಾಹನಗಳನ್ನು ವಿತರಿಸಲಾಯಿತು.

ಅಂಗನವಾಡಿ ಕೇಂದ್ರಗಳು ಆರಂಭವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ 50 ಗರ್ಭಿಣಿಯರಿಗೆ ಸೀಮಂತ ನೆರವೇರಿಸಲಾಯಿತು. ಪುಟಾಣಿಗಳ ವೇಷಭೂಷಣ ಸ್ಪರ್ಧೆ ಗಮನಸೆಳೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನಕುಮಾರ, ಜಿಲ್ಲಾ ನಿರೂಪಣಾಧಿಕಾರಿ ಅನಿಲ ಹೆಗಡೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪರ್ವೀನ್ ಶೇಖ್, ಬೆಳಗಾವಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರ್.ರಾಮಮೂರ್ತಿ, ಬೆಳಗಾವಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ, ಮುಖಂಡರಾದ ಶಂಕರಗೌಡ ಪಾಟೀಲ, ಯುವರಾಜ ಕದಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net