

ಚಿತ್ರದುರ್ಗ: ಬಾಲ್ಯ ವಿವಾಹ ನಿಯಂತ್ರಣ ನಿಟ್ಟಿನಲ್ಲಿ ಆರೋಗ್ಯಾಧಿಕಾರಿಗಳು ಕಾಳಜಿ ವಹಿಸಬೇಕು. ಜತೆಗೆ ಜನರ ಸಹಕಾರ ಅಗತ್ಯ ಎಂದು ಡಿಎಚ್ಒ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.
ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳಿಗೆ ಜನನ ಪೂರ್ವ ರೋಗ ಪರೀಕ್ಷೆ ತಂತ್ರಜ್ಞಾನ ನಿಯಂತ್ರಣ ಮತ್ತು ದುರ್ಬಳಕೆ ತಡೆ ಕಾಯ್ದೆ-1994 (ಪಿಸಿ-ಪಿಎನ್ಡಿಟಿ) ಕುರಿತಂತೆ ಡಿಎಚ್ಒ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಬಗ್ಗೆ ಮತ್ತು ಪಿಸಿಪಿಎನ್ಡಿಟಿ ಕಾಯ್ದೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಬೇಕು ಎಂದು ಸೂಚಿಸಿದರು.
ಪಿಸಿಪಿಎನ್ಡಿಟಿ ಕಾಯ್ದೆಯ ಹಾಗೂ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್.ಪವಿತ್ರಾ ವಿವರಿಸಿದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಅಭಿನವ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ನಾಗರಾಜ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸುಧಾ, ಕಾರ್ಯಕ್ರಮ ವ್ಯವಸ್ಥಾಪಕ ಪ್ರಫುಲ್ಲಚಂದ್ರ, ಜಿಲ್ಲಾ ಮಿಷನ್ ಸಂಯೋಜಕ ಬಿ.ವಿನಯ್, ಜೆಂಡರ್ ಸ್ಪೆಷಲಿಸ್ಟ್ ಡಿ.ಗೀತಾ, ಪಿಎಂಎಂವಿವೈ ಸಂಯೋಜಕ ಚೇತನ್ ಇದ್ದರು.
ಮಿಷನ್ ಶಕ್ತಿ ಯೋಜನೆಯಡಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಹಾಗೂ ಸಬಲೀಕರಣಕ್ಕಾಗಿ ಸ ರ್ಕಾರದ ಯೋಜನೆಗಳ ಕುರಿತ 100 ದಿನಗಳ ವಿಶೇಷ ಜಾಗೃತಿ ಅಭಿಯಾನದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.