ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ

Balya
Published on

ಚಿತ್ರದುರ್ಗ: ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಪಾಲಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲೇ ವಿವಾಹ ಮಾಡಬೇಡಿ ಎಂದು ಕೂಡಾ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಎಚ್ಚರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಟಿಪ್ಪು ಸ್ಪೋರ್ಟ್ಸ್ ಕ್ರಿಕೆಟ್ ಕ್ಲಬ್‌ನಿಂದ ಬಡಾಮಕಾನ್‌ನ ಶಾದಿ ಮಹಲ್‌ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ, ಮಹಿಳೆಯರ-ಮಕ್ಕಳ ಅಕ್ರಮ ಸಾಗಾಣೆ ತಡೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾಗುತ್ತಿರುವ ಪ್ರಕರಣ ಇತ್ತೀಚೆಗೆ ಸಾಕಷ್ಟು ಕಂಡು ಬರುತ್ತಿದ್ದು, ಬಡತನ ಹಾಗೂ ಇತರೆ ಕಾರಣಕ್ಕೆ ಹದಿಹರೆಯದವರಿಗೆ ಮದುವೆ ಮಾಡಿದರೆ ಪಾಲಕರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಲಿದೆ. ಹೀಗಾಗಿ ಬಾಲ್ಯವಿವಾಹ ಮಾಡಬೇಡಿ ಎಂದು ಸಲಹೆ ನೀಡಿದರು.

ವಕೀಲ ಬಿ.ಕೆ.ರಹಮತ್‌ವುಲ್ಲಾ ಮಾತನಾಡಿ, ದೇಶದ ಕಾನೂನು ಪರಿಪಾಲಿಸುವುದು ಧರ್ಮದ ಅರ್ಧ ಭಾಗವಿದ್ದಂತೆ ಎಂಬುದನ್ನು ಮರೆಯಬೇಡಿ. ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಇಟ್ಟುಕೊಂಡರೆ ಪೋಕ್ಸೋ ಕಾಯ್ದೆಯಡಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಬಾಲ್ಯವಿವಾಹ ತಡೆ ಪ್ರತಿಯೊಬ್ಬರ ಜವಾಬ್ದಾರಿ. ಸ್ತ್ರೀ-ಪುರುಷರ ವಿವಾಹ ಪ್ರಕೃತಿ ನಿಯಮ. ಅದಕ್ಕಾಗಿ ಅರ್ಹ ವಯಸ್ಸಿನಲ್ಲೇ ವಿವಾಹವಾಗಲು ಮುಂದಾಗಿ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಎಂ.ವೀಣಾ, ನಗರಸಭೆ ಸದಸ್ಯ ನಸ್ರುಲ್ಲಾ, ಮುಖಂಡರಾದ ಇಕ್ಬಾಲ್ ಹುಸೇನ್, ಟಿಪ್ಪುಖಾಸಿಂ ಆಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net