ಬಾಲ್ಯವಿವಾಹ, ಬಾಲ್ಯ ಗರ್ಭಾವಸ್ಥೆ ಪಿಡುಗು ತೊಲಗಿಸಿ

Judge
Published on

ಚಿತ್ರದುರ್ಗ: ದೇಶದೊಳಗೆ ಸಾಮಾಜಿಕ ಪಿಡುಗಾಗಿರುವ ಬಾಲ್ಯವಿವಾಹ, ಬಾಲ್ಯ ಗರ್ಭಾವಸ್ಥೆ ಸಂಪೂರ್ಣ ನಿರ್ಮೂಲನೆಗೆ ಎಲ್ಲ ಸರ್ಕಾರಿ ಅಧಿಕಾರಿಗಳು ಕೈ ಜೋಡಿಸಿ, ಸಮನ್ವಯದಿಂದ ಕಾರ್ಯನಿರ್ವಹಿಸಿ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಆರ್.ನಟರಾಜ್ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಭಾನುವಾರ ಬಾಲ್ಯವಿವಾಹ, ಬಾಲ್ಯ ಗರ್ಭಾವಸ್ಥೆ ತಡೆ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಲ್ಯವಿವಾಹ ಬಹುಕಾಲದಿಂದಲೂ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿದೆ. ಬಡತನ, ಅನಕ್ಷರತೆ ಇದಕ್ಕೆ ಕಾರಣ. ಸ್ವಾತಂತ್ರೃ ಪೂರ್ವದಲ್ಲಿ ಸಮಾಜ ಸುಧಾರಕರ ಪ್ರಯತ್ನದಿಂದಾಗಿ 1929ರಲ್ಲಿ ನಿರ್ಬಂಧ ಕಾಯ್ದೆ ಜಾರಿಯಾಯಿತು. 2006ರಲ್ಲಿ ನಿಷೇಧ ಕಾಯ್ದೆ ಜಾರಿಯೊಂದಿಗೆ ತಡೆಯಲು ಕಾನೂನಿಗೆ ಹೆಚ್ಚಿನ ಬಲ ತುಂಬಲಾಗಿದೆ. ಆದರೂ ನಿರ್ಲಕ್ಷದಿಂದಾಗಿ ನಿರ್ಮೂಲನೆ ಸಾಧ್ಯವಾಗಿಲ್ಲ ಎಂದು ಬೇಸರಿಸಿದರು.

ಸಹಾಯವಾಣಿಗೆ ಬಂದ ದೂರುಗಳಿಗೆ ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು. ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಇಲಾಖೆ ನೌಕರರು ಬಾಲ್ಯವಿವಾಹದ ಮಾಹಿತಿ ತಿಳಿದ ತಕ್ಷಣ ತಡೆಗೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಹದಿಹರೆಯದ ಯುವಕ-ಯುವತಿಯರ ದೈಹಿಕ ತುಡಿತ, ಕುತೂಹಲ, ಆಸೆಗೆ ಒಳಗಾಗಿ ಬಾಲ್ಯ ಗರ್ಭಾವಸ್ಥೆಯಂತಹ ದುಸ್ಥಿತಿಗೆ ಕಾರಣವಾಗುತ್ತಿದೆ. ದೈಹಿಕ ಹಾಗೂ ಮಾನಸಿಕವಾಗಿ ಸಧೃಡವಾಗಿರದ ವಯಸ್ಸಿನಲ್ಲಿ ವಿವಿಧ ಸಂಕಷ್ಟಗಳಿಗೆ ಒಳಗಾಗುತ್ತಾರೆ. 18 ವರ್ಷದೊಳಗಿನ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಪೋಕ್ಸೋ ಕಾಯ್ದೆ ಜಾರಿಯಲ್ಲಿದ್ದು, ಪ್ರಕರಣ ಕಂಡುಬಂದ ತಕ್ಷಣ ದೂರು ದಾಖಲಿಸಿ ಎಂದು ತಾಕೀತು ಮಾಡಿದರು.

ಜಿಲ್ಲೆಗೆ ಐದನೇ ಸ್ಥಾನ: ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರೋಣ ವಾಸುದೇವ ಮಾತನಾಡಿ, ಬಾಲ್ಯವಿವಾಹ, ಬಾಲ್ಯ ಗರ್ಭಾವಸ್ಥೆ ಪ್ರಕರಣಗಳಲ್ಲಿ ಚಿತ್ರದುರ್ಗ ಜಿಲ್ಲೆಯು ರಾಜ್ಯದಲ್ಲಿ 5ನೇ ಸ್ಥಾನದಲ್ಲಿದೆ. ಇದನ್ನು ತಡೆಯುವುದು ಕೇವಲ ಒಂದು ಇಲಾಖೆ ಜವಾಬ್ದಾರಿಯಲ್ಲ. ಎಲ್ಲ ಇಲಾಖೆಗಳು ಸೇರಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು ತಡೆಗಟ್ಟಲು ಮುಂದಾಗೋಣ ಎಂದು ಸಲಹೆ ನೀಡಿದರು.

ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಮಾತನಾಡಿ, ಗ್ರಾಪಂಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸದಸ್ಯರು, ಜನಪ್ರತಿನಿಧಿಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಬಾಲ್ಯವಿವಾಹ ಕುರಿತು ಜಾಗೃತಿ ಆಂದೋಲನ ಹಮ್ಮಿಕೊಂಡು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಸಾಮಾಜಿಕ ಪಿಡುಗನ್ನು ತಡೆಯುವ ನಿಟ್ಟಿನಲ್ಲಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ನಿತ್ಯವೂ ಮಕ್ಕಳ ಹಾಜರಾತಿ ಟ್ರ್ಯಾಕಿಂಗ್ ಮಾಡಲಾಗುತ್ತಿದೆ. ದೀರ್ಘಕಾಲ ಗೈರಾಗುವ ಹೆಣ್ಣು ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿ ಪರಿಶೀಲಿಸಿ, ನಿಗಾವಹಿಸುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಹೆಚ್ಚಾಗಿರುವ ಪ್ರಕರಣಗಳನ್ನು ಹಂತ-ಹಂತವಾಗಿ ಇಳಿಮುಖ, ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಮಕ್ಕಳ ಮೇಲೆ ದುಷ್ಪರಿಣಾಮ ಹೆಚ್ಚು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಮಾತನಾಡಿ, ಬಾಲ್ಯವಿವಾಹ, ಬಾಲ್ಯ ಗರ್ಭಾವಸ್ಥೆ ಪಿಡುಗು ಮಕ್ಕಳ ಮೇಲೆ ಬಹಳಷ್ಟು ದುಷ್ಪಾರಿಣಾಮ ಬೀರಲಿದೆ. ಇದು ಮೂಲ ಹಕ್ಕುಗಳ ಉಲ್ಲಂಘನೆಯೂ ಹೌದು. ಹೀಗಾಗಿ ಪ್ರಕರಣಗಳನ್ನು ಸವಾಲಾಗಿಸಿಕೊಂಡು ನಿರ್ಮೂಲನೆ ಮಾಡಬೇಕಿದೆ ಎಂದು ತಿಳಿಸಿದರು.

ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ಮುಖ್ಯ ಜವಾಬ್ದಾರಿ ನಾಗರಿಕರ ಮೂಲ ಹಕ್ಕುಗಳ ರಕ್ಷಣೆ ಮಾಡುವುದಾಗಿದ್ದು, ನಾವೆಲ್ಲರೂ ಸಮನ್ವಯತೆ, ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net