ಬಾಲ್ಯವಿವಾಹ ತಡೆಗೆ ಸಂಕಲ್ಪ ಮಾಡಿ

11 Hulsur 1
ಹುಲಸೂರಿನಲ್ಲಿ ಶ್ರೀ ಬಸವಕುಮಾರ ಶಿವಯೋಗಿಗಳ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ನಿಮಿತ್ತ ಶನಿವಾರ ಆಯೋಜಿಸಿದ್ದ ಮಕ್ಕಳ ಜಾತ್ರೆ ಕಾರ್ಯಕ್ರಮವನ್ನು ಪುಟ್ಟಗೌರಿ ಧಾರಾವಾಹಿ ಖ್ಯಾತ ನಟಿ ರಂಜನಿ ರಾಘವನ್ ಉದ್ಘಾಟಿಸಿದರು. ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶಶಿಧರ ಕೋಸಂಬೆ, ಸುರೇಶ ಚನ್ನಶೆಟ್ಟಿ ಇತರರಿದ್ದರು.
Published on

ಹುಲಸೂರು: ಬಾಲ್ಯ ವಿವಾಹದಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಇದನ್ನು ತಡೆಗಟ್ಟಲು ಪಾಲಕರು ಸಂಕಲ್ಪ ಮಾಡಬೇಕು ಎಂದು ಪುಟ್ಟಗೌರಿ ಧಾರವಾಹಿ ನಟಿ ರಂಜನಿ ರಾಘವನ್ ಹೇಳಿದರು.

ಪಟ್ಟಣದ ಗುರುಬಸವೇಶ್ವರ ಪ್ರೌಢಶಾಲೆಯಲ್ಲಿ ಲಿಂ.ಬಸವಕುಮಾರ ಯೋಗಿಗಳ ೪೯ನೇ ಪುಣ್ಯಸ್ಮಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ನಿಮಿತ್ತ ಶನಿವಾರ ಆಯೋಜಿಸಿದ್ದ ಮಕ್ಕಳ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮಾಡಿರುವ ಪುಟ್ಟಗೌರಿಯ ಮದುವೆ ಧಾರಾವಾಹಿಯಲ್ಲಿ ಬಾಲ್ಯವಿವಾಹದಿಂದ ನಡೆಯುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇವೆ ಎಂದರು.

೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ ಮಾಡುವುದಿಲ್ಲ ಎಂಬ ಬಗ್ಗೆ ಪ್ರಮಾಣ ವಚನ ಸ್ವೀಕರಿಸಿ, ಹೆಣ್ಣು ಮಕ್ಕಳ ಬದುಕನ್ನು ರೂಪಿಸೋಣ ಎಂದು ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಇತ್ತೀಚೆಗೆ ಬಾಲ್ಯವಿವಾಹದಿಂದಲೇ ಅಪ್ರಾಪ್ತ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿ ಶಿಶು ಮರಣ ಪ್ರಮಾಣ ಅಧಿಕವಾಗುತ್ತಿದ್ದು, ಬಾಲ್ಯವಿವಾಹ ತಡೆಯುವುದೇ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಳೆದ ೩-೪ ವರ್ಷದಲ್ಲಿ ಬಾಲ್ಯವಿವಾಹದಿಂದ ೧.೬೦ ಲಕ್ಷ ಬಾಲ ಗರ್ಭಿಣಿಯರಾಗಿದ್ದಾರೆ. ೨,೦೭೯ ತಾಯಂದಿರು ಮರಣ ಹೊಂದಿದ್ದಾರೆ. ಅಪ್ರಾಪ್ತ ಕಾರಣ ದೈಹಿಕವಾಗಿ ಆರೋಗ್ಯ ಸದೃಢವಾಗಿಲ್ಲದಕ್ಕೆ ಮೂರು ವರ್ಷದೊಳಗಿನ ೨೧ ಸಾವಿರ ಮಕ್ಕಳ ನಿರ್ಜೀವ ಜನನ ಜತೆ ಆರು ತಿಂಗಳೊಳಗಿನ ೧೭ ಸಾವಿರ ಮಕ್ಕಳು ಸಾವನ್ನಪ್ಪಿವೆ. ಇದಕ್ಕೆಲ್ಲ ಮೂಲ ಕಾರಣ ಬಾಲ್ಯವಿವಾಹ. ಇದನ್ನು ಬೇರು ಸಮೇತ ಕಿತ್ತು ಹಾಕಿ ಅರಿವು ಮತ್ತು ಜಾಗೃತಿಯಿಂದ ಇದನ್ನು ಹೋಗಲಾಡಿಸಬೇಕು ಎಂದರು.

ಬೀದರ್‌ನ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು.

ಚನ್ನಬಸವೇಶ್ವರ ಗುರುಕುಲ ವಿದ್ಯಾರ್ಥಿಗಳ ಮಲಗಂಬ ಪ್ರದರ್ಶನ ನೋಡುಗರ ಗಮನ ಸೆಳೆಯಿತು ಹಾಗೂ ವಿವಿಧ ಶಾಲಾ ಮಕ್ಕಳ ಭಾಷಣ, ಸಂಗೀತ, ನೃತ್ಯ ಸೇರಿ ಸೌಂದರ್ಯ ಸ್ಫರ್ಧೆ ನಡೆದವು.

ಜವಳಿ ಮತ್ತು ಕೈಮಗ್ಗ ಇಲಾಖೆ ಆಯುಕ್ತೆ ಕೆ.ಜ್ಯೋತಿ ಅವರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಗದಗಯ್ಯ ಮಠಪತಿ ಇತರರಿದ್ದರು. ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ ಸ್ವಾಗತಿಸಿದರು. ಡಾ.ಎಸ್.ಎಂ.ಭಕ್ತ ಕುಂಬಾರ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net