

ಚಿಕ್ಕಮಗಳೂರು: ಹೆಣ್ಣು ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿರುವ ಬಾಲ್ಯ ವಿವಾಹವು ಕಾನೂನು ವಿರೋಧಿಯಾಗಿದ್ದು, ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಪ್ರತಿಯೊಂದು ಇಲಾಖೆಗಳ ಪಾತ್ರ ಮಹತ್ವದ್ದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ನಗರದ ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ `ಬಾಲ್ಯ ವಿವಾಹ, ಬಾಲ್ಯ ಗರ್ಭಿಣಿ, ಪೋಕ್ಸೋ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳು ಮತ್ತು ಇನ್ನಿತರೆ ಶಿಶು ಕೇಂದ್ರಿತ ವಿಷಯಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ಮಾತನಾಡಿದರು.
ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವ ಸಮಯದಲ್ಲಿ, ಮದುವೆ, ಗಂಡ, ಮಕ್ಕಳೆಂದರೆ ಏನು ಎಂಬ ಅರಿವಿಲ್ಲದ ಸಂದರ್ಭದಲ್ಲಿ ಮದುವೆ ಮಾಡಿದಲ್ಲಿ ಸಮಸ್ಯೆಗೆ ಸಿಲುಕುತ್ತಾರೆ. ಜೊತೆಗೆ ಗರ್ಭಕೋಶದ ತೊಂದರೆ, ರಕ್ತಹೀನತೆಯಿಂದ ಬಳಲುತ್ತಾರೆ. ಬಾಲ್ಯದಲ್ಲಿ ವಿವಾಹ ಮಾಡಿದರೆ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಇಡೀ ಜೀವನ ಹಾಳು ಮಾಡಿಕೊಂಡು ಕುಟುಂಬಗಳು ಬೀದಿಗೆ ಬೀಳುತ್ತವೆ. ಬಾಲ್ಯ ವಿವಾಹ ತಡೆಯುವ ಸಲುವಾಗಿ ವಿವಿಧ ಇಲಾಖೆಗಳಿಗೆ ಜವಾಬ್ದಾರಿ ನೀಡಲಾಗಿದೆ. ಅದರಂತೆ ಕಾರ್ಯಪ್ರವೃತ್ತರಾಗಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಮಾತನಾಡಿ, ಬಾಲ್ಯ ವಿವಾಹ, ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಗರ್ಭಿಣಿಯಾಗುವುದನ್ನು ತಡೆಗಟ್ಟುವಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಏಳು ದಿನಗಳಿಗಿಂತ ಹೆಚ್ಚಿನ ಅವಧಿಗೆ ಶಾಲೆಗೆ ಗೈರು ಹಾಜರಾದಲ್ಲಿ ಆ ಶಾಲೆಯ ಶಿಕ್ಷಕರು ಅನುಸರಣೆ ಮಾಡಿ ಶಾಲೆಗೆ ಮರು ಹಾಜರಾಗುವಂತೆ ನೋಡಿಕೊಳ್ಳಬೇಕು. ಶಾಲೆಗೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಮಾಹಿತಿ ಲಭ್ಯವಾಗದ ಪ್ರಕರಣಗಳು ಕಂಡು ಬಂದಲ್ಲಿ ಆ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕಾವಲು ಸಮಿತಿಗೆ ವರದಿ ನೀಡಬೇಕು. ಶಾಲೆಗೆ ಗೈರುಹಾಜರಾಗಲು ನಿಖರವಾದ ಕಾರಣಗಳನ್ನು ತಿಳಿದು ಶಾಲೆಗೆ ಮರು ದಾಖಲಿಗೆ ಕ್ರಮ ವಹಿಸಬೇಕು ಎಂದು ಹೇಳಿದರು.
ಶಾಲೆಗಳಲ್ಲಿ ಪ್ರಮುಖವಾಗಿ ವಿದ್ಯಾರ್ಥಿನಿಯರಿಗೆ ಶೌಚಗೃಹ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಶಾಲಾ ಆವರಣದಲ್ಲಿ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಬೇಕು. ಬಾಲ್ಯ ವಿವಾಹ ನಡೆಯುವ ಕುರಿತು ಮಾಹಿತಿ ದೊರೆತಲ್ಲಿ ಸಹಾಯವಾಣಿ ಹಾಗೂ ಅಧಿಕಾರಿಗಳ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಅಳವಡಿಸಬೇಕು ಎಂದರು.
ಶಾಲೆಗಳಲ್ಲಿ ಕಡ್ಡಾಯವಾಗಿ ಪಾಲಕರ ಸಭೆಗಳನ್ನು ಏರ್ಪಡಿಸಿ, ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು. ಶಾಲಾ ವ್ಯಾಪ್ತಿಯ ಆರೋಗ್ಯಾಧಿಕಾರಿಗಳನ್ನು ಭೇಟಿ ಮಾಡಿ ಮಕ್ಕಳ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಬೇಕು ಎಂದು ತಿಳಿಸಿದರು.
ಬಾಲ ಗರ್ಭಿಣಿಯರ ನಿಖರವಾದ ವಯಸ್ಸನ್ನು ದಾಖಲಿಸಲು ಆರೋಗ್ಯ ಕೇಂದ್ರಗಳಲ್ಲಿ ವಯಸ್ಸಿನ ಮ್ಯಾಟ್ರಿಕ್ಸ್ ಸೂಚ್ಯಂಕ(ಏಜ್ ಮ್ಯಾಟ್ರಿಕ್ಸ್ ಇಂಡೆಕ್ಸ್)ವನ್ನು ಕಡ್ಡಾಯವಾಗಿ ಅನುಸರಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಬಾಲ ಗರ್ಭಿಣಿಯರ ಬಗ್ಗೆ ವರದಿ ಮಾಡಲು ಸರಳೀಕೃತ ವಿಧಾನ ಅಳವಡಿಸಬೇಕು. ವೈದ್ಯರ ಸಲಹೆ ಇಲ್ಲದೆ ಗರ್ಭಪಾತ ಮಾಡುವಂಥ ಮಾತ್ರೆಗಳನ್ನು ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಔಷಧ ನಿಯಂತ್ರಣ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಸರ್ಕಾರಿ, ಖಾಸಗಿ ವಸತಿ ಶಾಲೆಗಳಿಗೆ ನಿಗದಿತವಾಗಿ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು ಎಂದು ಸೂಚಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರು ಮತ್ತು ಮಕ್ಕಳ ಕಾವಲು ಸಮಿತಿಗಳನ್ನು ಕಡ್ಡಾಯವಾಗಿ ರಚಿಸಿ ಕಾಲ ಕಾಲಕ್ಕೆ ಸಭೆಗಳನ್ನು ನಡೆಸಿ, ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಎಸ್‌ಪಿ ವಿಕ್ರಮ್ ಅಮಟೆ ಮಾತನಾಡಿ, ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಯ ೧೦೯೮ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ಇಂತಹ ಘಟನೆಗಳನ್ನು ತಡೆಗಟ್ಟಬಹುದು. ಯಾವುದೇ ಕಾರಣಕ್ಕೂ ಹಳ್ಳಿಗಳಲ್ಲಿ ಪ್ರಕರಣಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸಬಾರದು. ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಜರುಗಿಸಿದರೆ ಮುಂದೆ ಇಂತಹ ಪ್ರಕರಣಗಳು ನಡೆಯುವುದಿಲ್ಲ ಎಂದರು.
ಸಭೆಯಲ್ಲಿ ಎಎಸ್‌ಪಿ ಸಿ.ಟಿ.ಜಯಕುಮಾರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.