ಕೊಳ್ಳೇಗಾಲ: ಭಿಕ್ಷಾಟನೆ ನಿರ್ಮೂಲನೆ ಮತ್ತು ಬಾಲ್ಯವಿವಾಹ ತಡೆಗೆ ಪರಿಣಾಮಕಾರಿ ಕ್ರಮ ಆಗಬೇಕಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳು ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೊಳ್ಳೇಗಾಲ ಪಟ್ಟಣದಲ್ಲಿ ಮಹಿಳೆಯರು ಮಕ್ಕಳನ್ನು ಬಳಸಿಕೊಂಡು ಭಿಕ್ಷೆ ಬೇಡುವುದು ಕಂಡುಬಂದಿದೆ. ಕಾನೂನು ಪ್ರಕಾರ ಭಿಕ್ಷೆ ಬೇಡುವುದು ಮತ್ತು ಕೊಡುವುದು ತಪ್ಪಾಗಿರುತ್ತದೆ. ಅದರಲ್ಲೂ ಮಕ್ಕಳನ್ನು ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಾಗಾಗಿ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದರು.
ತಹಸೀಲ್ದಾರ್, ನಗರಸಭೆ ಪೌರಾಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಬಂಧಪಟ್ಟ ಇಲಾಖೆ ಸಭೆ ನಡೆಸಿ ಭಿಕ್ಷಾಟನೆ ತಡೆಗಟ್ಟುವ ಬಗ್ಗೆ ಚರ್ಚಿಸಿ ಕ್ರಮವಹಿಸಬೇಕು. ಹೊರ ರಾಜ್ಯಗಳಿಂದ ಕೆಲಸಕ್ಕೆ ಬಂದವರು ಇಲ್ಲಿ ಮಕ್ಕಳಿಂದ ಭಿಕ್ಷಾಟನೆ ಮಾಡಿಸುವ ಜಾಲದ ಬಗ್ಗೆ ನಿಗಾ ವಹಿಸಬೇಕು. ಬೇರೆಡೆಯಿಂದ ಕೂಲಿ ಕೆಲಸಕ್ಕೆ ಬಂದ ಕಾರ್ಮಿಕರ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತಂದು ಶಿಕ್ಷಣ ನೀಡಬೇಕು. ಸಣ್ಣ ಮಕ್ಕಳಾದರೆ ಅಂಗನವಾಡಿ ಕೇಂದ್ರದಲ್ಲಿ ಪೋಷಣೆ ಮಾಡಬೇಕು. ನಗರಸಭೆ ವತಿಯಿಂದ ಭಿಕ್ಷಾಟನೆ ಹಾಗೂ ಬಾಲ್ಯವಿವಾಹ ತಡೆ ಜಾಗೃತಿ ಬಗ್ಗೆ ಪೋಸ್ಟರ್‌ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಅಂಟಿಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಮಾತನಾಡಿ, ಭಿಕ್ಷಾಟನೆಗೆ ಮತ್ತು ಬಾಲ್ಯವಿವಾಹದ ಬಗ್ಗೆ ನಗರಸಭೆ ವತಿಯಿಂದ ಜಾಗೃತಿ ಮೂಡಿಸಿ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದೆಂದು ಹೇಳಿದರು. ನಗರಸಭೆ ಸದಸ್ಯ ಧರಣೇಶ್ ಮಾತನಾಡಿ, ಪಟ್ಟಣದಲ್ಲಿ ಅಲೆಮಾರಿ ಜನಾಂಗದ ಬಾಲಕರು, ಯುವಕರು ವೈಟ್ನರ್, ಸಲ್ಯೂಷನ್ ವಾಸನೆ ಸೇವಿಸಿ ನಶೆಯಲ್ಲಿ ತೇಲುತ್ತಾರೆ. ಶುಭ ಸಮಾರಂಭಗಳಿಗೆ ಲಿಂಗತ್ವ ಅಲ್ಪಸಂಖ್ಯಾತರು ಗುಂಪು ಗುಂಪಾಗಿ ಭೇಟಿ ನೀಡಿ ಹಣ ನೀಡುವಂತೆ ಪೀಡಿಸುವುದು ಹೆಚ್ಚಾಗಿದೆ. ಹೊರ ರಾಜ್ಯಗಳಿಂದ ಮಾನಸಿಕ ಅಸ್ವಸ್ಥರನ್ನು ತಂದು ಬಿಡಲಾಗುತ್ತಿದೆ ಎಂದು ದೂರಿದರು.
ನಿರ್ಲಕ್ಷ್ಯವಿದೆ: ತಾಪಂ ಇಒ ಗುರುಶಾಂತಪ್ಪ ಮಾತನಾಡಿ, ಬೀದಿಗಳಲ್ಲಿ ಸಿಗುವ ನಿರ್ಗತಿಕರನ್ನು ಪತ್ತೆ ಹಚ್ಚಿ ನಿರ್ಗತಿಕರ ಪುನರ್ವವಸತಿ ಕೇಂದ್ರಗಳಿಗೆ ಕರೆದೊಯ್ಯುವಲ್ಲಿ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವಿದೆ ಎಂದರು.
ಪಟ್ಟಣ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಮಂಗಳಮ್ಮ ಮಾತನಾಡಿ, ಕೊಳ್ಳೇಗಾಲ ಪಟ್ಟಣದಲ್ಲಿ ಮಹಿಳೆಯರ ಸಾಂತ್ವನ ಕೇಂದ್ರವನ್ನು ತೆರವುಗೊಳಿಸಲಾಗಿದೆ. ಚಾಮರಾಜನಗರ ಸಾಂತ್ವನ ಕೇಂದ್ರ ಅವಲಂಬಿಸಬೇಕಾಗಿದ್ದು ಸಮಸ್ಯೆಯಾಗಿದೆ ಎಂದರು. ಇದಕ್ಕೆ ಆಯೋಗದ ಸದಸ್ಯ ವೆಂಕಟೇಶ್ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಒಂದು ಸಾಂತ್ವನ ಕೇಂದ್ರ ಇರಬೇಕೆಂದು ಸರ್ಕಾರದ ಆದೇಶವಿದೆ ಎಂದರು. ಪೌರಾಯುಕ್ತ ಎ.ರಮೇಶ್, ಬಿಇಒ ಮಂಜುಳಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.