

ಚಿತ್ರದುರ್ಗ: ಮಕ್ಕಳ ಕಾಣೆ ಪ್ರಕರಣದ ತನಿಖೆಯಲ್ಲಿ ಬಾಲ್ಯವಿವಾಹ ನಡೆದಿರುವುದು ಪತ್ತೆಯಾದರೆ, ಬಾಲ್ಯವಿವಾಹದ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಬಾಲಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ಕಾಣೆಯಾದ ಮಕ್ಕಳ ಪತ್ತೆ ಕುರಿತು ಪಾಲಕರು, ಪೊಲೀಸ್ ತನಿಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕಾಣೆಯಾದ ಮಕ್ಕಳ ಪತ್ತೆ ಕಾರ‌್ಯ ಚುರುಕುಗೊಳಿಸಬೇಕು. ಹಳೆಯ ಪ್ರಕರಣಗಳನ್ನು ಮುಂದಿನ ತಿಂಗಳ ಸಭೆಯೊಳಗೆ ಕಡ್ಡಾಯವಾಗಿ ಪತ್ತೆ ಹಚ್ಚಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುವಂತೆ ತಾಕೀತು ಮಾಡಿದರು.
2021ರಿಂದ 2024ರ ವರೆಗೆ ಜಿಲ್ಲೆಯಲ್ಲಿ 375 ಮಕ್ಕಳ ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ 370 ಕೇಸ್‌ಗಳಲ್ಲಿ ಪತ್ತೆ ಹಚ್ಚಲಾಗಿದೆ. 5 ಪ್ರಕರಣಗಳು ಬಾಕಿ ಇವೆ. ಇದೇ ಅವಧಿ ಪಾಲಕರೊಂದಿಗೆ ಕಾಣೆಯಾದ 131 ಮಕ್ಕಳ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 129 ಕೇಸ್‌ಗಳು ಪತ್ತೆಯಾಗಿವೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಸವಿತಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಪ್ರಭಾಕರ್, ಮಕ್ಕಳ ವಿಶೇಷ ಪೊಲೀಸ್ ಘಟಕದ ಅಂಜಿನಪ್ಪ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಬಸವರಾಜ್, ಗುರುಮೂರ್ತಿ ಇತರರು ಇದ್ದರು.