ಬಾಲ್ಯದಿಂದಲೇ ಯೋಗ ಮಾಡಿಸಿ

h31-Vivekanand 1
Published on

ಹುಬ್ಬಳ್ಳಿ: ಬಾಲ್ಯದಿಂದಲೇ ಯೋಗಮಯ ಜೀವನ ರೂಢಿಸಿಕೊಂಡರೆ ಮುಂದೆ ಇಡೀ ಬದುಕು ರೋಗಮುಕ್ತವಾಗಿ ನಡೆಸಬಹುದು. ಅದಕ್ಕಾಗಿ ನಿತ್ಯ ಒಂದಿಷ್ಟು ಯೋಗಾಭ್ಯಾಸ ಅಗತ್ಯ, ಮಕ್ಕಳಲ್ಲಿ ಯೋಗದ ಅಭಿರುಚಿ ಬೆಳೆಸಿ ಅದರಿಂದ ಭವಿಷ್ಯದ ಭಾರತ ಸ್ವಸ್ಥ ದೇಶವಾಗಲಿದೆ ಎಂದು ಯೋಗಋಷಿ ಬಾಬಾ ರಾಮದೇವ್ ಮಹಾರಾಜ್ ಹೇಳಿದರು.

ಇಲ್ಲಿಯ ಅರವಿಂದ ನಗರದ ವಿವೇಕಾನಂದ ಶಿಕ್ಷಣ ಸಂಸ್ಥೆಯ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಸಹೋದರ, ಸಹೋದರಿಯರಿಗೆ ಪ್ರೀತಿ ಪೂರ್ವಕ ನಮಸ್ಕಾರಗಳು... ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಬಾಬಾ ರಾಮದೇವ್ ಗುರೂಜಿ, ನಂತರದಲ್ಲಿ ಹಿಂದಿಯಲ್ಲಿ ಯೋಗಮಯ ಜೀವನದ ಮಹತ್ವ ತಿಳಿಸಿಕೊಟ್ಟರು.

ಶಾಲೆ ಮೈದಾನ ಹಿಂದು- ಮುಸ್ಲಿಂ ಭಾವೈಕ್ಯತೆ ಸಂಕೇತದಂತೆ ಕಾಣುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ ಬಾಬಾ, ವಿಶೇಷವಾಗಿ ಮಕ್ಕಳಿಗೆ 25 ವರ್ಷದವರೆಗೆ ಒಳ್ಳೆಯ ಬುನಾದಿ ಹಾಕಬೇಕು ಮುಂದೆ ನೂರು ವರ್ಷ ಆರೋಗ್ಯಕರ, ರೋಗಮುಕ್ತ ಜೀವನ ನಡೆಸುತ್ತಾರೆ. ಹಿಂದು, ಮುಸ್ಲಿಂ, ಕ್ರೖೆಸ್ತ, ಸಿಕ್ ಯಾರೇ ಆಗಿರಲಿ ಮಕ್ಕಳಿಗೆ ಯೋಗ ಕಲಿಸಿ, ಮನೆಯಲ್ಲಿ ಎಲ್ಲರೂ ಮಾಡಿ ಎಂದು ಹೇಳಿದರು.

ಶೀರ್ಷಾಸನ, ಸರ್ವಾಂಗಾಸನ, ಹಲಾಸನ, ಚಕ್ರಾಸನ, ಪಶ್ಚಿಮೋತ್ಥಾಸನ ಹಾಗೂ ಸೂರ್ಯನಮಸ್ಕಾರಗಳನ್ನು ಮಾಡಿಸಿ, ಯಾವ ಮಕ್ಕಳ ಮೊಣಕಾಲು ನಿಂತುಕೊಂಡರೆ ಕೂಡಿಕೊಳ್ಳುತ್ತವೋ ಅಂಥವರಿಗೆ ಗರುಡಾಸನ, ವೃಕ್ಷಾಸನ ಹೇಳಿಕೊಡಿ ಎಂದು ಸಲಹೆ ನೀಡಿದರು. ಪ್ರಾಣಾಯಾಮ ಸೇರಿ ಹಲವು ಆಸನಗಳನ್ನು ಮಾಡಿ ತೋರಿಸಿದರು. ಸಣ್ಣವನಿದ್ದಾಗ ತಮ್ಮ ಕಾಲು ಸಹ ಕೂಡುತ್ತಿತ್ತು ಯೋಗದಿಂದ ಸರಿ ಮಾಡಿಕೊಂಡೇ ಎಂದು ತಮ್ಮದೇ ಉದಾಹರಣೆ ನೀಡಿದರು.

ಸಂಸ್ಕರಿಸಿದ, ಆರ್ಟಿಫಿಶಿಯಲ್ ಪ್ರೋಟಿನ್, ಹೆಲ್ತ್ ಡ್ರಿಂಕ್ ಮಕ್ಕಳಿಗೆ ಕೊಡಬೇಡಿ, ಮೊಬೈಲ್​ಫೋನ್​ನಿಂದ ಮಕ್ಕಳನ್ನು ದೂರ ಇಡಿ, ಮಕ್ಕಳಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸಿ, ಯಾರು ಮಕ್ಕಳಿಗೆ ಮೊಬೈಲ್​ಫೋನ್ ಕೊಡುತ್ತಾರೋ ಅವರು ಮಕ್ಕಳ ಶತ್ರುಗಳು ಎಂದರು.

ಮೆಚ್ಚುಗೆ ಪಡೆದ ದಂಡಿನ ಕುಟುಂಬ

ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಅವರು 65ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಸುತ್ತಿದ್ದಾರೆ. ಇದೀಗ ವಿವೇಕಾನಂದ ಶಿಕ್ಷಣ ಸಂಸ್ಥೆಯ ಜವಾಬ್ದಾರಿಯನ್ನೂ ವಹಿಸಿಕೊಂಡು ಪುತ್ರ ರವೀಂದ್ರನಾಥ ದಂಡಿನ ಅವರಿಗೆ ಹೊಣೆ ಹೊರಿಸಿದ್ದಾರೆ. ಅವರು ಅತ್ಯುತ್ತಮವಾಗಿ ಸಂಸ್ಥೆ ನಡೆಸಿಕೊಂಡು ಹೊರಟಿದ್ದು, ಅವರ ಎಲ್ಲ ಸಂಸ್ಥೆಗಳಲ್ಲಿ ಯೋಗ ಶಿಕ್ಷಣ ನೀಡುತ್ತಿರುವ ಬಗ್ಗೆ ರಾಮದೇವ್ ಬಾಬಾ ಅವರ ಗಮನಕ್ಕೆ ತಂದಾಗ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿ ಅವರ ಸೇವಾ ಕಾರ್ಯ ಮುಂದುವರಿಯಲಿ ಎಂದು ಶಿಕ್ಷಣ ಪ್ರೇಮಿ ದಂಡಿನ ಕುಟುಂಬದವರನ್ನು ಆಶೀರ್ವದಿಸಿದರು.

ಹೆಸರೇ ಸ್ಪೂರ್ತಿದಾಯಕ: ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ವಿವೇಕಾನಂದರ ಹೆಸರೇ ಸ್ಪೂರ್ತಿ ನೀಡುವಂತೆ ಅವರ ಹೆಸರಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ 50 ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿ, ದಂಡಿನ ಕುಟುಂಬದವರು ಹಲವು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗುರಿ ಮುಟ್ಟಲು ಗುರು ಬೇಕು: ಸಾನ್ನಿಧ್ಯ ವಹಿಸಿದ್ದ ಕನಕಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಗುರಿ ಮುಟ್ಟಲು ಗುರು ಬೇಕು. ಗುರುವಿನ ಆದೇಶ ಪಾಲನೆ ಮಾಡುವಾತ ಜೀವನದಲ್ಲಿ ಯಶಸ್ಸು ಸಾಧಿಸುತ್ತಾನೆ. ಭೂಮಿಗೆ ಬಿದ್ದ ಬೀಜ, ತಲೆಯಲ್ಲಿ ಹೊಕ್ಕ ಅಕ್ಷರ ವ್ಯರ್ಥವಾಗುವುದಿಲ್ಲ ಎಂದರು. ಶಾಲೆಯ ಸುವರ್ಣ ಮಹೋತ್ಸವದ ಸ್ಮರಣಿಕೆ ಹಾಗೂ ವಿವೇಕವಾಣಿ ಪತ್ರಿಕೆ ಬಿಡುಗಡೆ ಮಾಡಲಾಯಿತು. ರಾಮದೇವ ಗುರೂಜಿ ಜೀವನಾಧಾರಿತ ಡಾಕ್ಯುಮೆಂಟರಿ ಪ್ರದರ್ಶಿಸಲಾಯಿತು.

ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಗೋವಿಂದ ಜೋಶಿ, ನಂದಕುಮಾರ, ಭವರಲಾಲ್ ಆರ್ಯ, ಜಯತೀರ್ಥ ಕಟ್ಟಿ, ಮಹೇಶ ಟೆಂಗಿನಕಾಯಿ, ಶಾಂತಣ್ಣ ಕಡಿವಾಲ, ರಘು ಅಕಮಂಚಿ, ಗಿರಿಜಾ ಅಂಥೋಣಿ, ಸರ್ವಮಂಗಳ ಪಾಠಕ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net