ಬಾಲ್ಯದಲ್ಲೇ ಜಾನಪದ ಸಂಸ್ಕೃತಿ ತಿಳಿಸಿ

janapada kavigosti news photo
Published on

ಬೀದರ್: ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಯಿಂದ ವಿಶ್ವ ಜಾನಪದ ಸಾಹಿತ್ಯದ ಉಗಮವಾಗಿದೆ ಎಂದು ಯುವ ಸಾಹಿತಿ ನಾಗಯ್ಯ ಸ್ವಾಮಿ ಹೇಳಿದರು.

ಜಿಲ್ಲಾ ಮಟ್ಟದ ದ್ವಿತೀಯ ಜಾನಪದ ಸಮ್ಮೇಳನದ ಎರಡನೇ ದಿನವಾದ ಸೋಮವಾರ ಜಾನಪದ ಕವಿಗೋಷ್ಠಿಯಲ್ಲಿ ಮಾತನಾಡಿ, ಜಾನಪದ ಸಾಹಿತ್ಯದಲ್ಲಿ ವಿಜ್ಞಾನ, ಅಧ್ಯಾತ್ಮ ಹಾಗೂ ನೈತಿಕ ಮೌಲ್ಯಗಳಿವೆ. ತಲೆ ತಲೆಮಾರುಗಳಿಂದ ಮುಂದುವರಿಸಿಕೊಂಡು ಬಂದ ಶ್ರೀಮಂತ ಜಾನಪದ ಸಂಸ್ಕೃತಿ ಇಂದು ಆಧುನೀಕರಣ ಭರಾಟೆಯಲ್ಲಿ ನಲಗುತ್ತಿದೆ. ಜಾನಪದ ಸಂಸ್ಕೃತಿ ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಬಾಲ್ಯದಿಂದಲೇ ತಿಳಿಸಿಕೊಡುವ ಕೆಲಸ ಪಾಲಕರು ಮಾಡಬೇಕು. ಇದರಿಂದ ಮಕ್ಕಳಲ್ಲಿ ನೈತಿಕತೆ, ಸಂಸ್ಕೃತಿ, ಸಂಪ್ರದಾಯ ಭಾವನೆ ಬರಲು ಸಾಧ್ಯ ಎಂದರು.

ಬ್ರಿಮ್ಸ್ ಪ್ರಾಧ್ಯಾಪಕಿ ಡಾ.ಶ್ರೇಯಾ ಮಹೇಂದ್ರಕರ್, ಸಾಹಿತಿ ಬಸವರಾಜ ಮೂಲಗೆ, ಶ್ರೀಕಾಂತ ಬಿರಾದಾರ, ಶೈಲಜಾ ಹುಡಗೆ, ಸ್ವರೂಪಾ ಪಾಟೀಲ್ ಮಾತನಾಡಿದರು. ಸಮ್ಮೇಳನಾಧ್ಯಕ್ಷೆ ರಾಣಿ ಸತ್ಯಮೂರ್ತಿ ಇತರರಿದ್ದರು. ಕವಿಗಳಾದ ರಮೇಶ ಸಲಗರ, ಲಕ್ಷ್ಮಣರಾವ ಕಾಂಚೆ, ಶಿವರಾಜ ಮೇತ್ರೆ, ಸಂಗಮೇಶ್ವರ ಮುರ್ಕಿ, ನಾಗಮ್ಮ ಭಂಗರಗಿ, ಓಂಕಾರ ಪಾಟೀಲ್, ಅರವಿಂದ ಕುಲಕರ್ಣಿ, ರವಿದಾಸ ಕಾಂಬಳೆ, ಭಕ್ತಿ ಪಾಟೀಲ್, ಪ್ರಾರ್ಥನಾ ಸೇರಿದಂತೆ ಇತರರು ಸ್ವರಚಿತ ಕವನ ವಾಚನ ಮಾಡಿದರು. ಮಲ್ಲಮ್ಮ ಸಂತಾಜಿ ಸ್ವಾಗತಿಸಿದರು. ಮೀರಾ ಖೇಣಿ ನಿರೂಪಣೆ ಮಾಡಿದರು. ಗಂಗಮ್ಮ ಫುಲೆ ವಂದಿಸಿದರು.

ಸ್ತ್ರೀ ಕೊಡುಗೆ ಅಪಾರ: ಜಾನಪದ ಕಲೆ ಹಾಗೂ ಸಂಸ್ಕೃತಿ ಶ್ರೀಮಂತಗೊಳಿಸುವಲ್ಲಿ ಮಹಿಳೆ ಕೊಡುಗೆ ಅಪಾರವಿದೆ ಎಂದು ಯುವ ಸಾಹಿತಿ ಡಾ.ಮಹೇಶ್ವರಿ ಹೇಡೆ ಅಭಿಪ್ರಾಯಪಟ್ಟರು. ಜಾನಪದ ಸಮ್ಮೇಳನದಲ್ಲಿ ಜಾನಪದ ಸಂಸ್ಕೃತಿ ಹಾಗೂ ಮಹಿಳೆ ಕುರಿತ ವಿಷಯದ ಮೇಲೆ ಮಾತನಾಡಿ, ಜಾನಪದ ಬೆಳೆಸುವಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಹಿರಿದಾಗಿದೆ. ಮಹಿಳೆ ಮನೆ ನಿರ್ವಹಣೆ ಜತೆಗೆ ಕೃಷಿಯಲ್ಲಿ ತೊಡಗಿಸಿಕೊಂಡು ಜಾನಪದ ಹಾಡುಗಳೊಂದಿಗೆ ನಿತ್ಯದ ಕಾರ್ಯ ನಿರ್ವಹಿಸುತ್ತಿದ್ದಳು. ಗ್ರಾಮೀಣ ಸಂಸ್ಕೃತಿಯನ್ನು ನಿಜವಾದ ಜಾನಪದ ಸಂಸ್ಕೃತಿಯನ್ನಾಗಿಸಿದ ನಮ್ಮ ಪೂರ್ವಜರ ಬದುಕನ್ನು ಇಂದಿನ ಯುವ ಪೀಳಿಗೆ ಪಾಲಿಸಬೇಕಿದೆ ಎಂದರು. ಆಶಯ ನುಡಿ ನುಡಿದ ಸಾಹಿತಿ ಪಾರ್ವತಿ ಸೋನಾರೆ, ಭಾರತ ಜಾನಪದ ಸಂಸ್ಕೃತಿಯ ತವರು. ನಮ್ಮ ಹಿರಿಯರು ಜಾನಪದ ಸಂಸ್ಕೃತಿ ಅಳವಡಿಸಿಕೊಂಡು ನೂರಾರು ವರ್ಷ ಸುಂದರ ಬದುಕು ಸಾಗಿಸಿದ್ದಾರೆ. ಆದರೆ ಇಂದಿನ ಯಾಂತ್ರಿಕ ಜೀವನದಿಂದ ಮನುಷ್ಯನ ಆಯುಷ್ಯ ಕ್ಷೀಣಿಸುತ್ತಿದೆ. ಇದಕ್ಕೆ ಜಾನಪದ ಜೀವನದಿಂದ ವಿಮುಖರಾಗುತ್ತಿರುವುದೇ ಮುಖ್ಯ ಕಾರಣ ಎಂದರು. ಹಿರಿಯ ಸಾಹಿತಿ ವಿ.ಎಂ.ಡಾಕುಳಗಿ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಸ್ವಾಮಿ, ಸಂಜೀವರೆಡ್ಡಿ, ಚನ್ನಪ್ಪ ಸಂಗೊಳಗಿ, ಸಂಜೀವಕುಮಾರ ಸ್ವಾಮಿ ಇದ್ದರು. ಡಾ. ಮಹಾನಂದಾ ಮಡಕಿ ಸ್ವಾಗತಿಸಿದರು. ಡಾ. ಸುನೀತಾ ಕೂಡ್ಲಿಕರ್ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net