

ಗುಂಡ್ಲುಪೇಟೆ: ಮಕ್ಕಳಿಗೆ ಬಾಲ್ಯದಲ್ಲಿಯೇ ವಾಕ್-ಶ್ರವಣ ದೋಷಗಳನ್ನು ಪತ್ತೆ ಹಚ್ಚಿದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಹೇಳಿದರು.
ಮಂಗಳವಾರ ಮೈಸೂರಿನ ಸ್ಪೀಚ್ ಆ್ಯಂಡ್ ಹಿಯರಿಂಗ್ ಸಂಸ್ಥೆ ತಾಲೂಕಿನ ಬೇಗೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಅಂಗನವಾಡಿ ಮಕ್ಕಳಿಗೆ ಎರಡನೇ ಮಟ್ಟದ ವಾಕ್ ಮತ್ತು ಶ್ರವಣ ಪರೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದ ಮಕ್ಕಳಲ್ಲಿ ದೋಷಗಳು ಉಂಟಾಗುತ್ತಿದ್ದು, ಸಕಾಲದಲ್ಲಿ ಪತ್ತೆಹಚ್ಚುವುದು ತುಂಬಾ ಅಗತ್ಯವಾಗಿದೆ ಎಂದು ಹೇಳಿದರು.
ಜಿಲ್ಲಾಕಾರಿ ಶಿಲ್ಪಾನಾಗ್ ಮಾತನಾಡಿ, ಹಿಂದೆ ಒಂದರಿಂದ 6 ವರ್ಷದ ಮಕ್ಕಳಿಗೆ ವಾಕ್ ಮತ್ತು ಶ್ರವಣ ಪರೀಕ್ಷೆ ನಡೆಸಿ ಶಸಚಿಕಿತ್ಸೆ ಮಾಡಲಾಗುತ್ತಿತ್ತು. ಆದರೆ ಆಧುನಿಕ ತಂತ್ರಜ್ಞಾನದಿಂದ ಆಗ ತಾನೇ ಹುಟ್ಟಿದ ಮಗುವಿನಿಂದ 6 ತಿಂಗಳವರೆಗಿನ ಮಕ್ಕಳಲ್ಲಿರುವ ವಾಕ್ ಮತ್ತು ಶ್ರವಣ ದೋಷಗಳನ್ನು ಪತ್ತೆಹಚ್ಚಲಾಗುತ್ತದೆ. ಇದರಿಂದ ಕೂಡಲೇ ದೋಷಗಳನ್ನು ಸರಿಪಡಿಸಲು ಸಾಧ್ಯವಾಗುತ್ತಿದ್ದು, ಜಿಲ್ಲೆಯನ್ನು ಶ್ರವಣದೋಷ ಮುಕ್ತವಾಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಕಾರಿ ಡಾ.ಚಿದಂಬರಂ ಮಾತನಾಡಿ, ಜಿಲ್ಲಾಕಾರಿಗಳ ವಿಶೇಷ ಕಾಳಜಿಯಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ವಾಕ್ ಮತ್ತು ಶ್ರವಣ ದೋಷ ಪತ್ತೆಹಚ್ಚಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದ್ದು, ಆರೋಗ್ಯ ಇಲಾಖೆ ಇದಕ್ಕೆ ತನ್ನ ಸಹಕಾರ ನೀಡುತ್ತಿದೆ ಎಂದು ಹೇಳಿದರು.
38 ಅಂಗನವಾಡಿ ಕೇಂದ್ರಗಳಿಂದ ಬಂದಿದ್ದ 200 ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಯಿತು. ತಹಸೀಲ್ದಾರ್ ಎಂ.ಎಸ್.ತನ್ಮಯಿ, ತಾಲೂಕು ಆರೋಗ್ಯಾಕಾರಿ ಡಾ.ಅಲೀಂ ಪಾಶಾ, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್ ಇತರರಿದ್ದರು.