

ಬೀದರ್: ಬೀದರ್ ಸೇರಿ ರಾಜ್ಯಾದ್ಯಂತ ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳು ಗಟ್ಟಿತನ ಪ್ರದರ್ಶಿಸುವ ಮೂಲಕ ತಮಗೆ ತಾವೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧ ಕುರಿತು ವಾಕಥಾನ್, ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ೧೮ ವಯಸ್ಸಿನವರೆಗೆ ಮದುವೆ ಬೇಡ ಎಂಬ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ತಮ್ಮ ಸುತ್ತಮುತ್ತ ಯಾರಾದರೂ ಮಕ್ಕಳಿಗೆ ಮದುವೆ ಮಾಡಿಸುತ್ತಿರುವುದು ಕಂಡುಬAದರೆ ಶಾಲೆ ಮುಖ್ಯಗುರು, ಗ್ರಾಪಂ, ಪೊಲೀಸ್ ಠಾಣೆ ಅಥವಾ ೧೦೯೮, ೧೧೨ ಕರೆ ಮಾಡಿ ಮಾಹಿತಿ ನೀಡಬೇಕು. ೧೮ ವರ್ಷ ಪೂರೈಸಿದ ಹುಡುಗಿಗೆ ಮದುವೆ ಆಗುವುದಾಗಿ ಪುರುಷರು ನಿರ್ಧರಿಸಬೇಕು. ನಿರ್ಲಕ್ಷ್ಯ್ಯ ಮಾಡಿದರೆ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಯೋಗದ ಮಾಜಿ ಅಧ್ಯಕ್ಷ ರಾಘವೇಂದ್ರ ಎಚ್.ಸಿ ಮಾತನಾಡಿ, ೧೮ ವರ್ಷದೊಳಗಿನ ಮಕ್ಕಳಿಗೆ ವಿವಾಹವಾಗಿ ಅವರ ಜತೆ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಬಾಲ್ಯವಿವಾಹ ಪದ್ಧತಿಯ ವಿರುದ್ಧ ಎಲ್ಲರೂ ಸೇರಿ ಜಾಗೃತಿ ಮೂಡಿಸಿ ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕ ಪ್ರಭಾಕರ ಮಾತನಾಡಿ, ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಈವರೆಗೆ ೨೦ ಬಾಲ್ಯ ವಿವಾಹ ತಡೆಯಲಾಗಿದೆ ಹಾಗೂ ೧೦೦ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಬಾಲ್ಯ ವಿವಾಹವಾದಲ್ಲಿ ಅಥವಾ ಮಾಡಿಸಿದಲ್ಲಿ ಶಿಕ್ಷೆ ಇದೆ ಎಂಬ ಭಾವನೆ ಎಲ್ಲರಲ್ಲಿ ಬರಬೇಕು. ಅಂದಾಗಲೇ ಅನಿಷ್ಠ ಪದ್ಧತಿ ತಡೆಯಲು ಸಾಧ್ಯ ಎಂದು ಹೇಳಿದರು.
ಆಯೋಗದ ಸದಸ್ಯ ಶಶಿಧರ ಕೋಸಂಬೆ, ಬಾಲ್ಯ ವಿವಾಹ ವಿರೋಧಿ ವೇದಿಕೆಯ ವೆಂಕಟೇಶ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮಪ್ಪ ಕನಕಟ್ಟೆ, ಪ್ರಮುಖರಾದ ಡಾ.ನಾಗರಾಜ ಎಂ., ರಜಿಯಾ ಬಳಬಟ್ಟಿ, ಸತೀಶ್ ಪಾಟೀಲ್, ಡಾ.ಮಲ್ಲಿಕಾರ್ಜುನ ಹಂಗರಗಿ, ಶಿವಯ್ಯ ಸ್ವಾಮಿ, ಗುರುರಾಜ, ಪ್ರಶಾಂತ ಬಿರಾದಾರ್ ಇತರರಿದ್ದರು. ವಾಕಥಾನ್ ಜಾಗೃತಿ ಜಾಥಾ ಕರ್ನಾಟಕ ಕಾಲೇಜಿನಿಂದ ಆರಂಭವಾಗಿ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಪುನಃ ಮಹಾವಿದ್ಯಾಲಯಕ್ಕೆ ಆಗಮಿಸಿ ಸಮಾಪ್ತಿಗೊಂಡಿತು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪದವಿಪೂರ್ವ ಶಿಕ್ಷಣ, ಶಾಲಾ ಶಿಕ್ಷಣ, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ, ವಿದ್ಯಾನಿಕೇತನ ಸಂಸ್ಥೆ, ಚೈಲ್ಡ್ ರೈಟ್ಸ್ ಟ್ರಸ್ಟ್ ಹಾಗೂ ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇದಿಕೆಯಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.
ರಾಜ್ಯದಲ್ಲಿ ೪೫ ಸಾವಿರ ಪ್ರಕರಣ
ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ೪೫,೫೫೭ ಮಕ್ಕಳು ಬಾಲ್ಯ ವಿವಾಹಕ್ಕೆ ಗುರಿಯಾಗಿ ತಮ್ಮ ತಾಯ್ತನ ವಯಸ್ಸಿಗೂ ಮುಂಚೆಯೇ ತಾಯಿಯಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು. ಬಾಲ್ಯ ವಿವಾಹ ತಡೆಯುವಲ್ಲಿ ಶಿಕ್ಷಣ ಇಲಾಖೆ ಪಾತ್ರ ಮಹತ್ವದಾಗಿದೆ. ಬಾಲ್ಯವಿವಾಹದ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಜತೆಗೆ ಶಾಲೆ ದಾಖಲಾತಿ ಅನುಗುಣ ಮಕ್ಕಳ ಹಾಜರಿ ಆಗುತ್ತಿದೆಯೇ ಅಥವಾ ಇಲ್ಲವೋ ಎಂಬುದರ ಮೇಲೆ ಗಮನ ಹರಿಸಬೇಕು. ಶಾಲೆ ಬಿಟ್ಟ ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರೆ ಬಾಲ್ಯವಿವಾಹ ತಡೆಯಬಹುದು ಎಂದರು.
ಸ್ವಾತಂತ್ರ್ಯಪೂರ್ವವೇ (೧೯೨೯ರಲ್ಲಿ) ಭಾರತದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಕೆಲ ವರ್ಷಗಳಲ್ಲಿ ಈ ಕಾಯ್ದೆ ಜಾರಿಯಾಗಿ ನೂರು ವರ್ಷ ಪೂರೈಸಲಿದೆ. ಆದರೂ ದೇಶದಲ್ಲಿ ಅನಿಷ್ಠ ಪದ್ಧತಿ ದೂರವಾಗಿಲ್ಲ. ಬಾಲ್ಯವಿವಾಹದ ಬಗ್ಗೆ ತಪ್ಪು ಕಲ್ಪನೆಗಳಿವೆ. ನಮ್ಮ ವ್ಯವಸ್ಥೆ ಸರಿಯಾದ ಮಾಹಿತಿ ನೀಡುವಲ್ಲಿ ಎಡವಿದೆ.
| ರಾಘವೇಂದ್ರ ಎಚ್.ಸಿ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ