

ಚಿತ್ರದುರ್ಗ: ಸಮಾಜಕ್ಕೆ ದೊಡ್ಡ ಪಿಡುಗಾಗಿರುವ ಬಾಲ್ಯ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಟಿಎಚ್‌ಒ ಡಾ.ಬಿ.ವಿ.ಗಿರೀಶ್ ಹೇಳಿದರು.
ಆರೋಗ್ಯ, ಶಿಕ್ಷಣ ಇಲಾಖೆಯಿಂದ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಬುಧವಾರ ಬಾಲ್ಯವಿವಾಹ ತಡೆಯಲು ಮಕ್ಕಳ ಪಾಲಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಬಾಲ್ಯವಿವಾಹ ಮಾಡಿ ಮಕ್ಕಳ ಸುಂದರ ಬದುಕು ಹಾಳು ಮಾಡಬೇಡಿ. ಈ ಕೆಟ್ಟ ಆಚರಣೆ ತಡೆಯಲು ಜಾಗೃತಿ ಮೂಡಿಸುವುದರ ಜೊತೆಗೆ ಸಮುದಾಯದ ಸಹಕಾರ ಅತ್ಯಗತ್ಯ ಎಂದು ಸಲಹೆ ನೀಡಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಬಾಲ್ಯವಿವಾಹಕ್ಕೆ ಬಡತನ, ಅನಕ್ಷರತೆ, ಮೂಢನಂಬಿಕೆ ಇನ್ನಿತರೆ ಕಾರಣಗಳಿವೆ. ಅಲ್ಲದೆ, ವರದಕ್ಷಿಣೆ ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಸಂಪೂರ್ಣವಾಗಿ ತೊಲಗಿಸಲು ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.
ಕಾಸರಹಟ್ಟಿ ಪಿಎಚ್‌ಸಿಯ ವೈದ್ಯಾಧಿಕಾರಿ ಡಾ.ಕಾವ್ಯಾ ಮಾತನಾಡಿ, ಬಾಲ್ಯವಿವಾಹದಿಂದ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ತಾಯಂದಿರು, ಶಿಶು ಮರಣಕ್ಕೂ ಕಾರಣವಾಗುತ್ತ್ತಿದೆ ಎಂದರು.
ಶಿಕ್ಷಕ ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಜೆ.ಎನ್.ಕೋಟೆ ಗ್ರಾಪಂ ಸದಸ್ಯೆ ವಿಜಯಮ,್ಮ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಪವಿತ್ರಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತುಕಾರಾಂ ಇತರರಿದ್ದರು.
ಗೊಲ್ಲರಹಟ್ಟಿಯಲ್ಲಿ ಜಾಗೃತಿ: ಹಿರಿಯೂರು ತಾಲೂಕಿನ ಅಮ್ಮನಹಟ್ಟಿ ಗೊಲ್ಲರಟ್ಟಿಯಲ್ಲಿ ಮೌಢ್ಯ ಪದ್ಧತಿ ಮತ್ತು ಆಚರಣೆ ವಿರುದ್ಧ ಮಂಗಳವಾರ ಜೆಂಡರ್ಸ್ ಸ್ಪೆಷಲಿಸ್ಟ್ ಡಿ.ಗೀತಾ ಜಾಗೃತಿ ಮೂಡಿಸಿದರು.
ಬಾಲ್ಯ ವಿವಾಹ ನಿಷೇಧ, ಬಾಲಕಾರ್ಮಿಕರ ನಿಷೇಧ, ಬಾಲ ತಾಯಂದಿರು, ಪೋಕ್ಸೋ ಕಾಯ್ದೆ ಸೇರಿ ಸುರಕ್ಷಿತ-ಅಸುರಕ್ಷಿತ ಸ್ಪರ್ಶ, ಶಾಲೆಯನ್ನು ತೊರೆದರೆ ಆಗುವ ಅನಾನುಕೂಲತೆಗಳ ಕುರಿತು ಪಾಲಕರೊಂದಿಗೆ ಚರ್ಚಿಸಿದರು.
ಮುಖ್ಯಶಿಕ್ಷಕ ಉಮೇಶ್, ಗ್ರಾಪಂ ಅಧ್ಯಕ್ಷ ತಿಪ್ಪೇಸ್ವಾಮಿ, ಶಿಕ್ಷಕಿ ಛಾಯಾ, ಅಂಗನವಾಡಿ ಮೇಲ್ವಿಚಾರಕಿ ಗೀತಾ, ಆಶಾ ಕಾರ್ಯಕರ್ತೆ ಜ್ಯೋತಿ, ಗ್ರಾಮದ ಪಾರ್ವತಮ್ಮ ಇತರರಿದ್ದರು.