ಬಾಲ್ಯ ವಿವಾಹ ತಡೆಗೆ ವಿದ್ಯಾರ್ಥಿಗಳು ಕೈಜೋಡಿಸಿ

27spt1
Published on

ಸೋಮವಾರಪೇಟೆ : ಬಾಲ್ಯ ವಿವಾಹ ತಡೆ ಜಾಗೃತಿಯಲ್ಲಿ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ ಕರೆ ನೀಡಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಿಂದ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬಾಲ್ಯ ವಿವಾಹ ತಡೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಅನಕ್ಷರತೆ, ಬಡತನ, ಮೂಢನಂಬಿಕೆಯಂತಹ ಪಿಡುಗುಗಳು ಬಾಲ್ಯವಿವಾಹಕ್ಕೆ ಕಾರಣವಾಗಿವೆ. ಬಾಲ್ಯವಿವಾಹದಂತಹ ಘಟನೆಗಳು ಕಂಡುಬಂದಾಗ ವಿದ್ಯಾರ್ಥಿಗಳು ಕೂಡಲೇ ಸಂಬಂಧಪಟ್ಟವರಿಗೆ ವಿಷಯ ಮುಟ್ಟಿಸಬೇಕು. ನಂತರ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ವಿಠಲ್ ಮಾತನಾಡಿ, ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮಾಡಲು ಅನೇಕ ಕಾಯ್ದೆಗಳಿವೆ. ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ತಡೆ ಇನ್ನಿತರ ಕಾಯ್ದೆಗಳಿವೆ. ಅದರಲ್ಲೂ ಪೋಕ್ಸೋ ಕಠಿಣವಾಗಿದೆ. ವಿದ್ಯಾರ್ಥಿನಿಯರನ್ನು ಚುಡಾಯಿಸುವುದು, ಡಬ್ಬಲ್‌ಮೀನಿಂಗ್‌ನಲ್ಲಿ ಮಾತನಾಡುವುದು, ಹಿಂಬಾಲಿಸುವುದು, ಕೆಟ್ಟ ಸ್ಪರ್ಶ ಇವೆಲ್ಲವೂ ಪೋಕ್ಸೋ ಅಡಿ ಬರುತ್ತದೆ. ಇಂತಹ ಕಿರುಕುಳಕ್ಕೆ ತುತ್ತಾದ ವಿದ್ಯಾರ್ಥಿನಿಯರು ಕೂಡಲೇ ಪೊಲೀಸರಿಗೆ ವಿಷಯ ತಿಳಿಸಬೇಕು ಎಂದು ಸಲಹೆ ನೀಡಿದರು.

ಕಾಲೇಜು ವಿದ್ಯಾರ್ಥಿನಿಯರು ವಿದ್ಯೆ ಕಲಿಯುವ ಸಂದರ್ಭದಲ್ಲಿ ತಪ್ಪು ಹೆಜ್ಜೆಗಳನ್ನು ಇಡಬಾರದು. ವಿದ್ಯೆಯಿಂದ ಮಾತ್ರ ನಿಮ್ಮೆಲ್ಲ ಕನಸುಗಳನ್ನು ನನಸು ಮಾಡಿಕೊಳ್ಳಬಹುದು. ಸಮಾಜ ದ್ರೋಹಿಗಳು ಅಪ್ರಾಪ್ತ ಹೆಣ್ಣುಮಕ್ಕಳನ್ನು ಬುಟ್ಟಿಗೆ ಹಾಕಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿರುತ್ತಾರೆ. ಬೈಕ್‌ಗಳಲ್ಲಿ ಹಿಂಬಾಲಿಸುತ್ತಾರೆ. ಮೊಬೈಲ್ ನಂಬರ್ ಪಡೆದು, ಮೆಸೇಜ್ ಕಳುಹಿಸುತ್ತಾರೆ. ಬಣ್ಣ ಬಣ್ಣದ ಮಾತುಗಳನ್ನಾಡುತ್ತಾರೆ. ಇದಕ್ಕೆ ಯಾರು ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು.

ಎಚ್ಚರ ತಪ್ಪಿದ ಹೆಣ್ಣು ಮಕ್ಕಳ ಮುಖದ ಮೇಲೆ ಆ್ಯಸಿಡ್ ಎರಚುವುದು, ಚಾಕು ಹಾಕಿ ಕೊಂದ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಮಕ್ಕಳಿಗೆ ಮೂಲಭೂತ ಹಕ್ಕುಗಳಿವೆ. ನಿಮ್ಮ ರಕ್ಷಣೆಗೆ ಕಾನೂನು ಇದೆ. ತಪ್ಪು ಹಾದಿ ತುಳಿಯದೆ ನಿಶ್ಚಿಂತೆಯಿಂದ ವಿದ್ಯಾಭ್ಯಾಸ ಮುಂದುವರಿಸಿ ಎಂದು ಸಲಹೆ ನೀಡಿದರು.

ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಕಾಲೇಜಿನ ಪ್ರಾಂಶುಪಾಲ ಮಿಲ್‌ಡ್ರೆಡ್ ಗೋನ್ಸಾಲ್ವೆಸ್ ಮಾತನಾಡಿ, ಬಾಲ್ಯವಿವಾಹ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪಾಲಕರು ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಬಾರದು. ಕೊಟ್ಟರೆ ತಮ್ಮ ಮಕ್ಕಳ ಭವಿಷ್ಯವನ್ನು ತಾವೇ ಹಾಳು ಮಾಡಿದಂತೆ. ಬಾಲ್ಯ ವಿವಾಹವನ್ನು ತಡೆಯಲು ನಾಗರಿಕ ಸಮಾಜ ಕೈಜೋಡಿಸಬೇಕು ಎಂದು ಹೇಳಿದರು. ಉಪನ್ಯಾಸಕ ಲಾಂಚನ್ ಕಾರೇಕಾರ್ ಇದ್ದರು. ಉಪನ್ಯಾಸಕರಾದ ಸೌಮ್ಯಾ, ಭವ್ಯಾ ಮತ್ತು ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net