ಬಾಲ್ಯ ವಿವಾಹ ಕಡೆಗಣಿಸಿದರೆ ಕ್ರಮ

DC Ramchandran
Published on

ಬೀದರ್: ಜಿಲ್ಲಾ, ತಾಲೂಕು, ಗ್ರಾಪಂ, ಗ್ರಾಮ, ನಗರಸಭೆ, ಪುರಸಭೆ ಮಟ್ಟದಲ್ಲಿ ನೇಮಕಗೊಂಡ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಈ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತು ಕೊಡಬೇಕು. ಉದಾಸೀನತೆ ತೋರಿ ಬಾಲ್ಯ ವಿವಾಹ ತಡೆಗೆ ವಿಫಲರಾದಲ್ಲಿ ಅಂಥವರ ವಿರುದ್ಧ ಕ್ರಮ ಜರುಗಿಸುವುದಾಗಿ ಡಿಸಿ ಆರ್. ರಾಮಚಂದ್ರನ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ತಡೆಗಟ್ಟುವ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ 18 ವರ್ಷದೊಳಗಿನ ಹೆಣ್ಣು, 21 ವರ್ಷದೊಳಗಿನ ಗಂಡು ಮದುವೆ ಆಗಕೂಡದು. ಇಂಥ ವಿವಾಹ ನಡೆಯದಂತೆ ನೋಡಿಕೊಳ್ಳುವುದು ನಿಷೇಧಾಧಿಕಾರಿಗಳ ಹೊಣೆ ಎಂದರು.
ಜನತೆಗೆ ಸರಳವಾಗಿ ಅರ್ಥವಾಗುವಂಥ ಬಾಲ್ಯವಿವಾಹ ತಡೆಗೆ ಸಂಬಂಧಿಸಿದ ಗೋಡೆ ಬರಹ ವಿವಿಧೆಡೆ ಹಾಕಿಸಬೇಕು. ಈ ವರ್ಷ ಪ್ರೌಢ ಶಾಲೆಗಳಲ್ಲೂ ಗೋಡೆ ಬರಹ ಬರೆಸಬೇಕು. ಮುಂದಿನ 5 ವರ್ಷದಲ್ಲಿ ಯಾವ್ಯಾವ ಕಡೆ ಗೋಡೆ ಬರಹ ಮಾಡುತ್ತೀರಿ ಎಂಬ ಬಗ್ಗೆ ಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸೂಚಿಸಿದರು.
ಡಾನ್ ಬಾಸ್ಕೋ ಸಂಸ್ಥೆ ಫಾದರ್ ಜೇಮ್ಸ್ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುವುದು ನಿಲ್ಲುತ್ತಿಲ್ಲ. ಬಾಲ್ಯ ವಿವಾಹ ತಡೆದ ಬಳಿಕ ಮುಂದೇನಾಯ್ತು ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಬೇಕು. ಬಾಲ್ಯ ವಿವಾಹ ತಡೆದಾದ ಬಳಿಕ 18 ವಯಸ್ಸಿನವರೆಗೆ ಆಕೆ ಮೇಲೆ ನಿಗಾ ಇಡುವ ಕಾರ್ಯವಾಗಬೇಕು ಎಂದು ಸಲಹೆ ಮಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಂದ್ರಕಾಂತ ಜಾಧವ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೌರಿಶಂಕರ ಪರತಾಪುರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net