ಬಾಲ್ಕಿಯಲ್ಲಿ ಯೋಗ ಮಹೋತ್ಸವ ೧೬ರಂದು

6blk1
ಭಾಲ್ಕಿಯಲ್ಲಿ ಗುರುವಾರ ಕರೆದಿದ್ದ ಸಭೆಯಲ್ಲಿ ಸೂರ್ಯ ಫೌಂಡೇಷನ್ ರಾಷ್ಟ್ರೀಯ ಉಪಾಧ್ಯಕ್ಷ ಅನಂತ ಬಿರಾದಾರ ಮಾತನಾಡಿದರು. ಶ್ರೀ ಗುರುಬಸವ ಪಟ್ಟದ್ದೇವರು, ಗುರುನಾಥ ರಾಜಗೀರಾ, ಸೂರಜಸಿಂಗ್ ರಾಜಪುತ, ಈಶ್ವರ ರುಮ್ಮಾ ಇದ್ದರು.
Published on

ಭಾಲ್ಕಿ: ಅಂತಾರಾಷ್ಟ್ರೀಯ ಯೋಗ ದಿನ ನಿಮಿತ್ತ ಪಟ್ಟಣದಲ್ಲಿ ಜೂ.೧೬ರಂದು ಸೂರ್ಯ ಫೌಂಡೇಷನ್, ಇಂಟರ್ ನ್ಯಾಷನಲ್ ನ್ಯಾಚುರೋಪಥಿ ಆರ್ಗನೈಜೇಶನ್, ಭಾರತ ಸರ್ಕಾರದ ಆಯುಷ್ ಇಲಾಖೆ (ಐಎನ್‌ಒ) ಮತ್ತು ಹಿರೇಮಠ ಸಂಸ್ಥಾನ ಸಹಯೋಗದಡಿ ಯೋಗ ಮಹೋತ್ಸವ ಆಯೋಜಿಸಲಾಗಿದೆ ಎಂದು ಫೌಂಡೇಷನ್ ರಾಷ್ಟ್ರೀಯ ಉಪಾಧ್ಯಕ್ಷ ಅನಂತ ಬಿರಾದಾರ ತಿಳಿಸಿದರು.

ಪಟ್ಟಣದ ಚನ್ನಬಸವಾಶ್ರಮ ಪರಿಸರದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಗುರುವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಇಂಟರ್‌ನ್ಯಾಷನಲ್ ಡೇ ಆಫ್ ಯೋಗ (ಐಡಿವೈ) ೧೦೦ ದಿನದ ಕ್ಷಣಗಣನೆಗಾಗಿ ಭಾರತ ಸರ್ಕಾರ ಈ ಸಲ ಮಹಿಳಾ ಸಬಲೀಕರಣ ಉದ್ದೇಶದೊಂದಿಗೆ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಹೊರಟಿದೆ. ಈ ಪ್ರಯುಕ್ತ ಸೂರ್ಯ ಫೌಂಡೇಷನ್, ಆಯುಷ್ ಇಲಾಖೆ ಸಹಯೋಗದಡಿ ದೇಶದ ನೂರು ಕಡೆ ಯೋಗ ಮಹೋತ್ಸವ ನಡೆಯುತ್ತಿದೆ ಎಂದರು.

ಚನ್ನಬಸವಾಶ್ರಮ ಪರಿಸರದಲ್ಲಿ ಅಂದು ಬೆಳಗ್ಗೆ ೬ರಿಂದ ೮ರವರೆಗೆ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯದಲ್ಲಿ ಯೋಗ ಮಹೋತ್ಸವವನ್ನು ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಮತ್ತು ಪತಂಜಲಿ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ನಡೆಸಿಕೊಡುವರು. ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಯೋಗಭ್ಯಾಸದಲ್ಲಿ ಸುಮಾರು ೩೦೦೦ ಜನರು ಭಾಗಿಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಸ್ವಸ್ಥ ಜೀವನ, ಉತ್ತಮ ಆರೋಗ್ಯಕ್ಕೆ ಯೋಗಾಭ್ಯಾಸ ಅಗತ್ಯವಾಗಿದೆ. ಸೂರ್ಯ ಫೌಂಡೇಷನ್ ಯೋಗ ಮಹೋತ್ಸವಕ್ಕೆ ಮುಂದಾಗಿರುವುದು ಅತ್ಯಂತ ಖುಷಿ ವಿಚಾರ. ಯಶಸ್ಸಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಗ್ರಾಮೀಣ ಭಾಗದಲ್ಲಿ ಜನಿಸಿದ ಅನಂತ ಬಿರಾದಾರ ರಾಷ್ಟ್ರಮಟ್ಟದಲ್ಲಿ ಸೂರ್ಯ ಫೌಂಡೇಷನ್ ಮೂಲಕ ಉತ್ತಮ ಹೆಸರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಕಾರ್ಯ ಮಾಡಲಿ ಎಂದು ಹಾರೈಸಿದರು.

ಫೌಂಡೇಷನ್ ಸಂಯೋಜಕ ಗುರುನಾಥ ರಾಜಗೀರಾ, ಕಾರ್ಯಕ್ರಮ ಸಂಯೋಜಕ ಈಶ್ವರ ರುಮ್ಮಾ, ಪ್ರಮುಖರಾದ ಸೂರಜಸಿಂಗ್ ರಾಜಪುತ, ಸುರೇಶ ಬಿರಾದಾರ, ಗೋವಿಂದರಾವ ಬಿರಾದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net