

ಮಂಡ್ಯ: ಇಲ್ಲಿನ ರೈಲು ನಿಲ್ದಾಣದ ಬಳಿ ಇರುವ ಶ್ರೀ ಬಾಲಸುಬ್ರಹ್ಮಣ್ಯೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಪೂಜಾ ಮಹೋತ್ಸವ ಯಶಸ್ವಿಯಾಗಿ ನಡೆಯಿತು.
ಅಡಿಗದ್ದಿಗೆ ಪೂಜಾ ಎಂದು ಕರೆಯಲಾಗುವ ಆಷಾಢ ಮಾಸದ ಕೃಷ್ಣ ಪಕ್ಷ, ಕೃತಿಕಾ ನಕ್ಷತ್ರದ ಅಂಗವಾಗಿ ದೇವಾಲಯದಲ್ಲಿ ಒಂದು ವಾರದಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಸಲಾಗಿದೆ. ಅಂತೆಯೇ ಭಾನುವಾರ ಸ್ಕಂದ ಹೋಮ, ಲಪಂಚಾಮೃತ ಅಭಿಷೇಕ ಮಾಡಲಾಯಿತು.
ಸ್ವಾಮಿಗೆ ಬೆಳ್ಳಿಯ ಕವಚಧಾರಣೆ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ಇದರೊಂದಿಗೆ ಮಹಾಗಣಪತಿ ಹೋಮ, ದುರ್ಗಾ ಹೋಮ ಮತ್ತು ಶ್ರೀ ಅಮ್ಮನವರಿಗೆ ಲಪಂಚಾಮೃತಾಭಿಷೇಕ, ಮಹಾಮಂಗಳಾರತಿ ನಡೆಸಲಾಯಿತು. ಸುದರ್ಶನ ಹೋಮ, ಮಹಾಪೂಜೆ ಮತ್ತು ಮಹಾ ಮಂಗಳಾರತಿ ನಡೆಯಿತು. ಬೆಳಗಿನಿಂದಲೇ ದೇವಾಲಯಕ್ಕೆ ಸಹಸ್ರಾರು ಜನ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಬೆಳಗಿನಿಂದ ಸಂಜೆಯವರೆಗೂ ದೇವಾಲಯಕ್ಕೆ ಬರುವ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು. ಆಡಿಗದ್ದಿಗೆ ಪೂಜೆ ಅಂಗವಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸುತ್ತಮುತ್ತಲ ಮರಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಟ್ರಸ್ಟ್ ಅಧ್ಯಕ್ಷ ಶಂಕರ್, ಕಾರ್ಯದರ್ಶಿ ಕಣಿವೇಲು, ಸಹ ಕಾರ್ಯದರ್ಶಿ ಕುಪ್ಪರಾಜು, ಉಪಾಧ್ಯಕ್ಷ ನಾರಾಯಣ, ಟ್ರಸ್ಟಿಗಳಾದ ರಘು, ರಾಜು, ಅರ್ಚಕರಾದ ಶಶಿಕುಮಾರ್, ಮಂಜುನಾಥ ಉಡುಪ ಇತರರಿದ್ದರು.