

ಚಿತ್ರದುರ್ಗ: ಮಣಪುರಂ ರಿತಿ ಜ್ಯೂಯಲರ್ಸ್‌ನಲ್ಲಿ ಗುರುವಾರ ಬಾಲಗೋಪಾಲರದ್ದೇ ಕಲರವ. ಮುದ್ದಾದ ಪುಟಾಣಿಗಳ ತುಂಟತನ, ಹೂ ನಗೆ, ಹಾವಭಾವಗಳು ನಂದಕಿಶೋರ, ನವನೀತ ಚೋರನ ಬಾಲ ಲೀಲೆಗಳನ್ನೇ ನೆನಪಿಸುವಂತಿದ್ದವು.
ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ಡಿಜಿಟಲ್ ವಿಭಾಗದ ಸಾರಥ್ಯ, ಮಣಪುರಂ ರಿತಿ ಜ್ಯೂಯಲರ್ಸ್, ಚಿತ್ರದುರ್ಗ-ಹಿರಿಯೂರು ಅಹೋಬಲ ಟಿವಿಎಸ್‌ನ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ವೇಷ ಫೋಟೊ ಸ್ಪರ್ಧಾ ವಿಜೇತರಾದ ಚಿಣ್ಣರಿಗೆ ಬಹುಮಾನ ವಿತರಿಸುವ ವೇಳೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಮಕ್ಕಳು ಹಾಗೂ ಪಾಲಕರು ಸಾಕ್ಷಿಯಾದರು. ಮಕ್ಕಳೊಂದಿಗೆ ಬಹುಮಾನ ಪಡೆಯುವಾಗ ತಂದೆ-ತಾಯಂದಿರ ಖುಷಿಗೆ ಪಾರವೇ ಇರಲಿಲ್ಲ.
ಇಂಥ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ‘ವಿಜಯವಾಣಿ’ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಯಿತು. ಪತ್ರಿಕೆಯ ಸಮಾಜಮುಖಿ ಕಾರ್ಯಗಳು, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳನ್ನು ಓದುಗರಿಗೆ ಉಣಬಡಿಸುತ್ತಿರುವ ಕುರಿತು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಇತರೆ ಪತ್ರಿಕೆಗಳಿಗಿಂತ ಹೇಗೆ ವಿಭಿನ್ನ ಎಂಬುದನ್ನು ತಮ್ಮದೇ ಆದ ಮಾತುಗಳಲ್ಲಿ ವಿವರಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಉದ್ಘಾಟಿಸಿ ಮಾತನಾಡಿ, ವಿಜಯವಾಣಿ ಪತ್ರಿಕೆ ಕೃಷ್ಣ ಜನ್ಮಾಷ್ಟಮಿಗೆ ಬಾಲಗೋಪಾಲ, ನವರಾತ್ರಿ ವೇಳೆ ನವೋಲ್ಲಾಸ ಸೇರಿ ಹಲವು ಸ್ಪರ್ಧೆ ಆಯೋಜಿಸುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಉತ್ತಮ ಸುದ್ದಿಗಳನ್ನು ಪ್ರಕಟಿಸಿ, ಅರಿವು ಮೂಡಿಸುವುದರೊಂದಿಗೆ ಜನಮಾನಸದಲ್ಲಿ ಹಚ್ಚ-ಹಸಿರಾಗಿ ಉಳಿದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಿವೈಎಸ್‌ಪಿ ಪಿ.ಕೆ.ದಿನಕರ್ ಮಾತನಾಡಿ, ಮುದ್ದು ಕೃಷ್ಣನ ತುಂಟಾಟಗಳನ್ನು ಮಕ್ಕಳ ವೇಷಭೂಷಣದೊಂದಿಗೆ ನೋಡುವುದೇ ಸಂತಸದ ಸಂಗತಿ. ಜಗತ್ತಿಗೆ ನೀತಿ ಪಾಠ ಹೇಳಿದ ಮಹಾಚೇತನ. ಉಡುಪಿಯಲ್ಲಿ ಇರುವ ವಿಗ್ರಹವೂ ಬಾಲರೂಪದ್ದಾಗಿದೆ. ಹೀಗಾಗಿ ಅತ್ಯಾಕರ್ಷಣೀಯವಾಗಿದೆ ಎಂದು ವರ್ಣಿಸಿದರು.
ಶ್ರೀಕೃಷ್ಣ ಭಾರತದ ಸಾಂಸ್ಕೃತಿಕ ನಾಯಕ: ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್ ಮಾತನಾಡಿ, ಭಾರತದ ಸಾಹಿತ್ಯ-ಸಾಂಸ್ಕೃತಿಕ ನಾಯಕ ಶ್ರೀಕೃಷ್ಣ. ಅಸತ್ಯ-ಅಧರ್ಮದ ವಿರುದ್ಧ ಹೋರಾಡಿ ಧರ್ಮ ರಕ್ಷಿಸಿದ ಧರ್ಮಾತ್ಮ. ಮಹಾಭಾರತದಿಂದ ಸರ್ವಕಾಲಕ್ಕೂ ತತ್ವಾದರ್ಶ ಮಾದರಿ ಎಂದು ಬಣ್ಣಿಸಿದರು.
ಬಾಲಕನಿದ್ದಾಗಲೇ ಬಾಯಿಯೊಳಗೆ ಬ್ರಹ್ಮಾಂಡ ತೋರಿಸಿ, ರಕ್ಕಸ-ರಕ್ಕಸಿಯರನ್ನು ಸಂಹರಿಸಿ, ಧರ್ಮ ಸ್ಥಾಪಿಸಿದ್ದರಿಂದ ಶ್ರೀಕೃಷ್ಣ ಎಲ್ಲರಿಗೂ ಇಷ್ಟ. ಬಾಲಗೋಪಾಲ ತುಂಬಾ ಉತ್ತಮ ಕಾರ್ಯಕ್ರಮ. ಪತ್ರಿಕೆ ಸಮಾಜಮುಖಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ.ನವೀನ್ ಮಾತನಾಡಿ, ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಶ್ರೀಕೃಷ್ಣನ ವೇಷದಲ್ಲಿ ನೋಡಲು ಇಷ್ಟಪಡುತ್ತಾರೆ. ಸಂಸ್ಕೃತಿ-ಸಂಸ್ಕಾರ ಪರಿಚಯಿಸುವ ಕೆಲಸವನ್ನು ನಮ್ಮ ಪತ್ರಿಕೆಯೂ ಆರಂಭದಿಂದಲೂ ಮಾಡುತ್ತ ಬಂದಿದೆ ಎಂದರು.
ದೈವ, ಮಹಾತ್ಮರ ವೇಷಭೂಷಣ ಮಕ್ಕಳಿಗೆ ಹಾಕಿಸುವ ಮೂಲಕ ಪಾಲಕರು ದೇಶಭಕ್ತಿ ಮೂಡಿಸಬೇಕು. ವಿಜಯವಾಣಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಕಾರಣ ರಾಜ್ಯದ ಜನರು ನಂ. 1 ಸ್ಥಾನದಲ್ಲಿ ಇಟ್ಟಿದ್ದಾರೆ. ಪತ್ರಿಕೆ ಓದಿ ಪ್ರೋತ್ಸಾಹಿಸಲು ಮುಂದಾಗಿ ಎಂದು ಮನವಿ ಮಾಡಿದರು.
ಮಣಪುರಂ ಗುಣಮಟ್ಟಕ್ಕೆ ಆದ್ಯತೆ: ಜ್ಯೂಯಲರ್ಸ್‌ನ ಸೇಲ್ಸ್ ಅಂಡ್ ಮಾರ್ಕೆಟಿಂಗ್‌ನ ಕರ್ನಾಟಕ-ಆಂಧ್ರಪ್ರದೇಶದ ರಾಜ್ಯ ಮುಖ್ಯಸ್ಥ ಎಂ.ಪೆರುಮಾಳ್ ಮಾತನಾಡಿ, ಕೇರಳದ ಕುಗ್ರಾಮದಲ್ಲಿ ಆರಂಭವಾದ ಮಣಪುರಂ ರಿತಿ ಜ್ಯೂಯಲರ್ಸ್ 5 ಸಾವಿರಕ್ಕೂ ಹೆಚ್ಚು ಶಾಖೆ ಹೊಂದಿದ್ದು, 30 ಸಾವಿರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿದೆ. ಕರ್ನಾಟಕದಲ್ಲಿ 6 ಸೇರಿ ದೇಶದಲ್ಲಿ ಒಟ್ಟು 12 ಪ್ಯಾನ್ ಇಂಡಿಯಾ ಶಾಖೆ ಇವೆ ಎಂದು ತಿಳಿಸಿದರು.
ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಿದ್ದು, ಆಭರಣಗಳು ಸ್ವತಃ ನಮ್ಮ ಕಂಪನಿಯಲ್ಲೇ ತಯಾರಾಗುವ ಕಾರಣ ಮೇಕಿಂಗ್ ಚಾರ್ಜ್ ಕೂಡ ಕಡಿಮೆ ಎಂದರು.
ಬಹುಮಾನ ವಿಜೇತರು: ಚಳ್ಳಕೆರೆಯ ಅಶ್ವಿಕ್ ಪ್ರಥಮ, ಚಿತ್ರದುರ್ಗದ ಹಿರಣ್ಯ ದ್ವಿತೀಯ, ವೈಷ್ಣವ್ ತೃತೀಯ ಬಹುಮಾನ ಮುಡಿಗೇರಿಸಿಕೊಂಡರು. 10 ಪುಟಾಣಿಗಳಿಗೆ ಸಮಾಧಾನಕರ, ಇನ್ನುಳಿದ 66 ಮಕ್ಕಳಿಗೆ ಮೆಚ್ಚುಗೆಯ ಬಹುಮಾನ ವಿತರಿಸಲಾಯಿತು.
ಮಣಪುರಂ ರಿತಿ ಜ್ಯೂಯಲರ್ಸ್‌ನ ಚಿತ್ರದುರ್ಗ ಶಾಖೆ ವ್ಯವಸ್ಥಾಪಕ ರೇವಣ್ಣಯ್ಯ, ಮುಖ್ಯ ಉಪಸಂಪಾದಕ ಹರ್ಷ ಪುರೋಹಿತ್, ವಿಶೇಷ ವರದಿಗಾರ ಡಿಪಿಎನ್ ಶ್ರೇಷ್ಠಿ, ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಎಂ.ಎಸ್.ಕುಮಾರಸ್ವಾಮಿ, ವರದಿಗಾರ ಕೆ.ಎಸ್.ಪ್ರಣವಕುಮಾರ್, ಚಿತ್ರದುರ್ಗ ಪ್ರಸರಾಂಗ ವಿಭಾಗದ ಶುಭಾಕರ್, ಲೆಕ್ಕ ಪತ್ರ ವಿಭಾಗದ ಸಹಾಯಕ ವ್ಯವಸ್ಥಾಪಕ ಪಿ.ಒ.ನಾಗರಾಜ್, ಛಾಯಾಚಿತ್ರಗ್ರಾಹಕ ವರದರಾಜ್ ಯಾದವ್, ಕೊಟ್ರೇಶ್, ತಿಪ್ಪೇಶ್ ಇತರರಿದ್ದರು.