ಬಾಲಕಿಯರ ವಸತಿ ನಿಲಯ ಉದ್ಘಾಟನೆ

25-pnp 2
ಪಾಂಡವಪುರದ ಕೃಷ್ಣನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯವನ್ನು ಸಸಿ ನೆಡುವ ಮೂಲಕ ಶಾಸಕ ಸಿ.ಎಸ್.ಪುಟ್ಟರಾಜು ಉದ್ಘಾಟಿಸಿದರು.
Published on

ಪಾಂಡವಪುರ: ಗ್ರಾಮೀಣ ಪ್ರದೇಶ ಮಕ್ಕಳಿಗಾಗಿಯೇ ಕ್ಷೇತ್ರ ವ್ಯಾಪ್ತಿಯ ಎಲ್ಲ ಹೋಬಳಿಗಳಲ್ಲೂ ಅಂಬೇಡ್ಕರ್, ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಆದರ್ಶ ವಸತಿ ಶಾಲೆಗಳನ್ನು ತೆರೆಯಲಾಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.

ಪಟ್ಟಣದ ಕೃಷ್ಣನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಅಗತ್ಯವಿದ್ದ ಎಲ್ಲ ವಸತಿ ಶಾಲೆಗಳಿಗೆ ಮಂಜೂರಾತಿ ನೀಡಿದ್ದರಿಂದ ವಸತಿ ನಿಲಯದ ಕಟ್ಟಡಗಳು ನಿರ್ಮಾಣವಾಗಿವೆ. ಪಟ್ಟಣದಲ್ಲಿ ನಿರ್ಮಾಣವಾಗಿರುವ ವಸತಿ ಶಾಲೆಗೆ ಜಾಗದ ಸಮಸ್ಯೆ ಇತ್ತು. ಹಿಂದಿನ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಅವರು ಕಟ್ಟಡಕ್ಕೆ ಅಗತ್ಯವಾದ ಜಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಉತ್ತಮ ಸೌಕರ್ಯವುಳ್ಳ ವಸತಿ ಶಾಲೆ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ, ತಾಪಂ ಇಒ ಲೋಕೇಶ್ ಮೂರ್ತಿ, ವಸತಿ ನಿಲಯದ ಮೇಲ್ವಿಚಾರಕ ಜಯರಾಮು, ದಸಂಸ ಮುಖಂಡ ಡಿ.ಕೆ.ಅಂಕಯ್ಯ, ಜೆಡಿಎಸ್ ಮುಖಂಡರಾದ ಕಣಿವೆ ಯೋಗೇಶ್, ಕನಗನಮರಡಿ ಬೊಮ್ಮರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net