ಬಾಲಕಿಯರ ಪಿಯು ಕಾಲೇಜಿಗೆ ಅಗತ್ಯ ನೆರವು

04NGD1
ನಂಜನಗೂಡಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ ಚಾಲನೆ ನೀಡಿದರು. ಕಳಲೆ ಕೇಶವಮೂರ್ತಿ, ಎಸ್.ಎನ್.ಚಂದ್ರಶೇಖರ ಬಾಬು, ಕೃಷ್ಣ ಕುಂಬ್ರಹಳ್ಳಿ ಇತರರು ಇದ್ದರು.
Published on

ನಂಜನಗೂಡು: ಸರ್ಕಾರಿ ಕಾಲೇಜು ವಿಭಾಗದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಕಾಯ್ದುಕೊಂಡಿರುವ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಎಲ್ಲ ರೀತಿಯ ನೆರವು ನೀಡುವ ಮೂಲಕ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸುವುದಾಗಿ ಶಾಸಕ ದರ್ಶನ್ ಧ್ರುವನಾರಾಯಣ ಭರವಸೆ ನೀಡಿದರು.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಉದ್ಘಾಟಿಸಿ ಮಾತನಾಡಿದರು.

ಪಿಯುಸಿ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಯ ಪ್ರಮುಖ ಘಟ್ಟ. ನಾನು ವೈದ್ಯನಾಗಬೇಕೆಂಬ ಹಂಬಲದೊಂದಿಗೆ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದೆ. ಆದರೆ, ಕಾನೂನು ವ್ಯಾಸಂಗದತ್ತ ಮುಖ ಮಾಡಿ ವಕೀಲನಾದೆ. ನೀವು ಕೂಡ ನಿರ್ದಿಷ್ಟ ಗುರಿಯಿಟ್ಟುಕೊಂಡು ವ್ಯಾಸಂಗದಲ್ಲಿ ತೊಡಗಿಸಿಕೊಳ್ಳಬೇಕು. ಈ ಕಾಲೇಜಿನಲ್ಲಿ ಕಳೆದ ಎರಡು ವರ್ಷಗಳಿಂದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸರ್ಕಾರಿ ಕಾಲೇಜು ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಕಾಯ್ದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಕಾಲೇಜಿನ ಪ್ರಾಂಶುಪಾಲ ಎಸ್.ಎನ್.ಚಂದ್ರಶೇಖರ ಬಾಬು ಮಾತನಾಡಿ, ಉತ್ತಮ ಫಲಿತಾಂಶ ನೀಡುವ ದೃಷ್ಟಿಯಿಂದ ಸಾಕಷ್ಟು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಾಲೇಜಿಗೆ ಇನ್ನಷ್ಟು ಮೂಲಸೌಕರ್ಯಗಳ ಅಗತ್ಯವಿದ್ದು, ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.

ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಕುರಹಟ್ಟಿ ಮಹೇಶ್, ಉತ್ತುಂಗ ಸಾಫ್ಟ್‌ವೇರ್ ಕಂಪನಿ ಮಾಲೀಕ ಕೃಷ್ಣ ಕುಂಬ್ರಹಳ್ಳಿ, ನಗರಸಭಾ ಸದಸ್ಯೆ ಮಂಗಳಮ್ಮ, ಎನ್‌ಎಸ್‌ಎಸ್ ವಿಭಾಗಾಧಿಕಾರಿ ಡಾ.ಡಿ.ಕೆ.ರವಿ, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್‌ರಾಜು, ಉಪನ್ಯಾಸಕರಾದ ಮಹದೇವು, ರಾಜು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಮತಾ, ದೊರೆಸ್ವಾಮಿ, ರಾಜೇಶ್, ಕೆ.ಪಿ.ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net