

ಹಾಸನ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯಾಡಿ ವಿವಿಧ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ನಿಗದಿತ ಗುರಿ ಸಾಧಿಸುವಂತೆ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯಡಿ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿ ಪರಿಶೀಲಿನೆ ನಡೆಸಿ ಮಾತನಾಡಿದ ಅವರು ಮೂರು ಮತ್ತು ನಾಲ್ಕನೇ ಕಂತಿನಲ್ಲಿ ಬಿಡುಗಡೆಯಾಗುವ ಅನುದಾನವನ್ನು ವೆಚ್ಚ ಮಾಡುವ ನಿಟ್ಟಿನಲ್ಲಿ ಫಲಾನುಭವಿಗಳ ಹಾಗೂ ಕಾಮಗಾರಿಗಳ ಆಯ್ಕೆ ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಸಭೆ ಚುನಾವಣೆ ಸಮಿಪಿಸುತ್ತಿದ್ದು, ಮಾದರಿ ನೀತಿ ಸಂಹಿತೆಯಿಂದ ಕೆಲಸಕ್ಕೆ ಅಡ್ಡಿಯಾಗದಂತೆ ಸರ್ಕಾರ ನಿಗದಿಪಡಿಸಿ ಸೂಚಿಸಿರುವ ಗುರಿಯನ್ನು ಯಾವುದೇ ಸಬೂಬು ಹೇಳದೆ ಸಂಪೂರ್ಣವಾಗಿ ಅನುದಾನ ವೆಚ್ಚ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಕಾರ್ಮಿಕ ಇಲಾಖೆಗೆ ಬಿಡುಗಡೆಯಾಗುವ ಅನುದಾನ ವೆಚ್ಚ ಮಾಡುವ ನಿಟ್ಟಿನಲ್ಲಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚುಲು ಅನಿರೀಕ್ಷಿತ ಭೇಟಿ ನೀಡಿ ಬಾಲಕಾರ್ಮಿಕರನ್ನು ಪತ್ತೆಹಚ್ಚಲು ಕ್ರಮವಹಿಸಿ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆಯಲ್ಲಿ ವಾರ್ಷಿಕವಾಗಿ ನಾಲ್ಕು ಹಂತದಲ್ಲಿ ಅನುದಾನ ಬಿಡುಗಡೆಯಾಗುತ್ತದೆ ನವೆಂಬರ್ ಅಂತ್ಯಕ್ಕೆ ಶೇ. 50ರಷ್ಟು ವೆಚ್ಚ ಮಾಡಲಾಗಿದೆ ಉಳಿದ ಎರಡು ಕಂತಿನ ಅನುದಾನವನ್ನು ಸಂಪೂರ್ಣವಾಗಿ ವೆಚ್ಚ ಮಾಡಿ ಆರ್ಥಿಕ ಹಾಗೂ ಭೌತಿಕ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಮಂಜು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.