ಬಾಲಕಾರ್ಮಿಕರ ದುಡಿಮೆ ಶಿಕ್ಷಾರ್ಹ; ವಿವಿಧ ಇಲಾಖೆಗಳಿಂದ ಜಾಗೃತಿಮಾಲೀಕರಿಗೆ ಎಚ್ಚರಿಕೆ

web
Published on

ಬೆಂ.ಗ್ರಾಮಾಂತರ: ಬಾಲಕಾರ್ಮಿಕರನ್ನು ದುಡಿಮೆಗೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ವಿವಿಧ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಿದರು.

ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಇಲಾಖೆ, ಪೊಲೀಸ್, ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ(1098) ಕೇಂದ್ರ ಜಂಟಿಯಾಗಿ ದೇವನಹಳ್ಳಿ ತಾಲೂಕು ವಿಜಯಪುರದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದವು.

ಪಟ್ಟಣದ ವಿವಿಧ ಬೇಕರಿಗಳು, ಗ್ಯಾರೇಜುಗಳು, ಚಿಲ್ಲರೆ ಅಂಗಡಿಗಳು, ಮಾಂಸದ ಅಂಗಡಿಗಳಲ್ಲಿ ತಪಾಸಣೆ ಕೈಗೊಂಡು ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ನೇಮಿಸಿಕೊಳ್ಳದಂತೆ ಅಂಗಡಿ ಮಾಲೀಕರಿಗೆ ಭಿತ್ತಿಪತ್ರಗಳನ್ನು ನೀಡುವ ಮೂಲಕ ಎಚ್ಚರಿಕೆ ರವಾನಿಸಿದರು.

ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಅಂಗಡಿಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿಕೊಂಡಿರುವುದು ಕಂಡುಬಂದರೆ ಕೂಡಲೇ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಿ ದೂರು ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎಸ್.ಸುಬ್ಬಾರಾವ್ ಮಾತನಾಡಿ, ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಯಾರಿಗೂ ಅವಕಾಶವಿಲ್ಲ. ನಿಮ್ಮ ಸುತ್ತಮತ್ತಲ ಪ್ರದೇಶದಲ್ಲಿ ಯಾರೇ ಆಗಲಿ ಬಾಲಕಾರ್ಮಿಕರನ್ನು ದುಡಿಮೆಗೆ ಬಳಸಿಕೊಂಡಿರುವುದು ಕಂಡುಬಂದರೆ ಕೂಡಲೇ ಮಾಹಿತಿ ನೀಡಿ ಎಂದು ಮನವಿ ಮಾಡಿದರು.

ಸಹಾಯಕ ಆರಕ್ಷಕ ಉಪನೀರಿಕ್ಷಕ ಸಿದ್ದಲಿಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಈ ಬಗ್ಗೆ ಅರಿತು ಯಾರೂ ಬಾಲಕಾರ್ಮಿಕ ಪದ್ಧತಿ ಅನುಸರಿಸಬಾರದು ಎಂದು ಎಚ್ಚರಿಕೆ ನೀಡಿದರು.

ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, 14 ವರ್ಷದೊಳಗಿನ ಯಾವುದೇ ಮಕ್ಕಳನ್ನು, ಯಾವುದೇ ಕ್ಷೇತ್ರದಲ್ಲಿ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದಲ್ಲಿ, ಅಂತಹವರಿಗೆ ಕನಿಷ್ಠ 6 ತಿಂಗಳಿಗಿಂತ ಕಡಿಮೆ ಇಲ್ಲದಂತೆ ಹಾಗೂ ಗರಿಷ್ಠ 2 ವರ್ಷದವರೆಗ ಜೈಲು ಶಿಕ್ಷೆ ಮತ್ತು 20 ಸಾವಿರದಿಂದ 50 ಸಾವಿರ ರೂ.,ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅಂಗಡಿ ಮಾಲೀಕರಿಗೆ ತಿಳಿಸಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸವಿತಾ, ಕಾರ್ಮಿಕ ನಿರೀಕ್ಷಕ್ಷಿ ಅಂಬಿಕಾ ಮತ್ತು ಪ್ರದೀಪ್, ಮಕ್ಕಳ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಮುರಳಿ ಮತ್ತು ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಅನಿತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net