ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಿ: ನ್ಯಾ. ಇನವಳ್ಳಿ

ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತಡೆಗಟ್ಟಿ: ನ್ಯಾ. ಇನವಳ್ಳಿ
Published on

ಹಾಸನ: ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಂಡಾಗ ಮಾತ್ರ ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆ ಸಾಧ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎನ್. ಇನವಳ್ಳಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಲಕಾರ್ಮಿಕ ಪದ್ಧತಿ ವಿರುದ್ಧ ಪ್ರತಿದಿನವೂ ವಿರೋಧ ವ್ಯಕ್ತ ಪಡಿಸುವ ಮನೋಭಾವನೆ ಬೆಳೆಸಿಕೊಂಡು, ಬಾಲಕಾರ್ಮಿಕ ನಿರ್ಮೂಲನೆಗೆ ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.

ವಿದ್ಯಾಭ್ಯಾಸದಿಂದ ಎಲ್ಲವೂ ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಅಧಿಕಾರಿಗಳು ಕೂಡ 18 ವರ್ಷದ ಒಳಗಿನ ಮಕ್ಕಳಿಗೆ ಕೆಲಸ ಮಾಡುವ ಸಂದರ್ಭ ಸೃಷ್ಟಿಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.

ವಿದ್ಯಾಭ್ಯಾಸದಲ್ಲಿರುವ ತಾರತಮ್ಯ ನಿಲ್ಲಬೇಕು. ಎಲ್ಲರಿಗೂ ಶಿಕ್ಷಣ ಸಿಗಬೇಕು. ಮೂಲಭೂತ ಸೌಕರ್ಯದೊಂದಿಗೆ ಶಿಕ್ಷಣ ಎಲ್ಲಾ ಮಕ್ಕಳಿಗೂ ಸಿಗಬೇಕು. ಇಂತಹ ಕಾರ್ಯಕ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿದಿನ ಬಾಲಕಾರ್ಮಿಕ ವ್ಯವಸ್ಥೆಯನ್ನು ತಡೆಯುವ ದಿನವಾಗಬೇಕು. ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳಿಗೆ ಕಡ್ಡಾಯ ಶಿಕ್ಷಣ ದೊರೆಯಬೇಕು. ಶಿಕ್ಷಣ ಇಲಾಖೆಯೂ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಅವರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಆನಂದ್ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ರೀತಿಯ ಬಾಲ ಕಾರ್ಮಿಕರು ಇರದಂತೆ ಜಿಲ್ಲಾಡಳಿತದ ವತಿಯಿಂದ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ವ್ಯವಸ್ಥೆ ತಡೆಗಟ್ಟಲು ಪ್ರತಿಯೊಬ್ಬರೂ ಸಹಕಾರ ನೀಡಿದ್ದಲಿ ಮಾತ್ರ ವೇಗವಾಗಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಬಹುದು ಎಂದು ಹೇಳಿದರು.

ಸಂಪನ್ನೂಲ ವ್ಯಕ್ತಿಯಾಗಿ ಭಾರತ ಗೈಡ್ಸ್‌ನ ಆಯುಕ್ತರು ಹಾಗೂ ವಕೀಲರಾದ ಎಂ.ಬಿ. ಗಿರಿಜಾಂಬಿಕಾ ಅವರು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ವಿವರಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಕೆ. ರವಿಕಾಂತ್ ಅವರು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಪ್ರತಿಜ್ಞೆ ಬೋಧಿಸಿದರು.

ಕಾರ್ಯಕ್ರಮದಲ್ಲಿ ಉಪ ಕಾರ್ಮಿಕ ಆಯುಕ್ತ ಸೋಮಣ್ಣ, ಪೌರಾಯುಕ್ತ ಸತೀಶ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಪ್ರಚೋಧನ ಸಂಸ್ಥೆಯ ಪೌಲಸ್, ಸ್ವಾತಂತ್ರೃ ಹಿರಿಯ ಹೋರಾಟಗಾರ ಶಿವಣ್ಣ, ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷರಾದ ಕೋಮಲಾ, ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ಹಾಗೂ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net