ಬಾಲಕಾರ್ಮಿಕ ಪದ್ಧತಿ ಸಮಾಜಕ್ಕೆ ಕಳಂಕ ; ಮಕ್ಕಳ ಹಕ್ಕಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಆಂತೋಣಿ ಹೇಳಿಕೆ

26Tmk_Child_Labour
Published on

ತುಮಕೂರು: ಬಾಲಕಾರ್ಮಿಕ ಪದ್ಧತಿ ಸಮಾಜಕ್ಕೆ ಕಳಂಕವಾಗಿದ್ದು, ಮುಂದಿನ 10 ತಿಂಗಳಲ್ಲಿ ತುಮಕೂರನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಆಂತೋಣಿ ಸೆಬಾಸ್ಟಿಯನ್ ಹೇಳಿದರು.

ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಶುಕ್ರವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ಆಯೋಜಿಸಿದ್ದ ಬಾಲ ಕಾರ್ಮಿಕ ಮುಕ್ತ ತುಮಕೂರಿನತ್ತ ಹಾಗೂ ಕಾರ್ಮಿಕ ಸಮ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಾಲಾ ವಾತಾವರಣದಿಂದ ವಂಚಿತರಾಗುವ ಮಕ್ಕಳಿಗೆ ಭವಿಷ್ಯವೇ ಇಲ್ಲ. ಸುಂದರ, ಸುರಕ್ಷಿತ ವಾತವಾರಣದಲ್ಲಿ ಮಕ್ಕಳು ಬೆಳೆಯಬೇಕು. ಶಿಕ್ಷಣದ ಸೌಲಭ್ಯ ದೊರಕಿದರೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ. ಇಲ್ಲವಾದಲ್ಲಿ ಬಾಲ ಕಾರ್ಮಿಕ ದಾಸ್ಯಕ್ಕೆ ಒಳಗಾಗುತ್ತಾರೆ. ಎಲ್ಲ ವರ್ಗದ ಮಕ್ಕಳು ಶಾಲೆಗೆ ಸೇರಿದಾಗ ಮಕ್ಕಳ ರಕ್ಷಣೆಯ ಇಲಾಖೆ ಅಗತ್ಯವಿರುವುದಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಸಂಘ-ಸಂಸ್ಥೆಗಳು ಜತೆಗೊಡಿ ಕೆಲಸ ಮಾಡಿದಾಗ ಬಾಲ ಕಾರ್ಮಿಕ ಪದ್ಧತಿ ಪಿಡುಗು ತೊಡೆದು ಹಾಕಬಹುದು ಎಂದರು. ಮಧುಗಿರಿ ಡಿಡಿಪಿಐ ರೇವಣ್ಣ ಸಿದ್ದಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಟರಾಜ್, ಕೆ.ದೊರೈರಾಜ್, ಬಾಲ ಕಾರ್ಮಿಕ ಯೋಜನಾ ಸೋಸೈಟಿ ಯೋಜನಾ ನಿರ್ದೇಶಕ ರವಿಕುಮಾರ್, ಚೈಲ್ಡ್ ಲೈನ್ ಕೋ ಆರ್ಡಿನೇಟರ್ ಅಭಿವೃದ್ದಿ ಸಾಮಾಜಿಕ ಸ್ವಯಂ ಸೇವಾ ಸಂಸ್ಥೆಯ ನರಸಿಂಹಮೂರ್ತಿ, ಶಿವರಾಜ್ ಉಪಸ್ಥಿತರಿದ್ದರು.

1986ರಲ್ಲಿ ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ ಜಾರಿಯಾದರೂ ಆ ಕಾನೂನು ಸರಿಯಾಗಿ ಅನುಷ್ಠಾನಗೊಂಡಿಲ್ಲ. ಬಾಲ ಕಾರ್ಮಿಕ ಪದ್ಧತಿ ಹುಟ್ಟಿರುವುದು ಬಡತನ, ಅನಕ್ಷರತೆಯಿಂದ. ಎರಡೂ ಯಾವಾಗ ಕೊನೆಗಾಣುತ್ತವೋ ಆಗ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಾಗುವುದು. ರಾಘವೇಂದ್ರ ಶೆಟ್ಟಿಗಾರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಧೀಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net