

ಎಂ.ಎನ್.ಸುರೇಶ್ ಕನಕಪುರ
ಮೇ 19ರಂದು ನಾಪತ್ತೆಯಾದ ನಗರದ ತಾಯಪ್ಪನಗಲ್ಲಿಯ ಶ್ರೇಯಸ್ (17) ಇನ್ನೂ ಪತ್ತೆಯಾಗದಿರುವುದರಿಂದ ಹೆತ್ತವರು ಆತಂಕಕೊಳಗಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ವಕೀಲ ಶಂಕರೇಗೌಡ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕನಕಪುರ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೇ 19ರ ರಾತ್ರಿ ಶ್ರೇಯಸ್ ಎಂಬಾತ ಗಬ್ಬಾಡಿಯ ವಕೀಲ ಜಿ.ಎಸ್.ಶಂಕರೇಗೌಡ ಅವರ ಕಚೇರಿಗೆ ಹೋಗಿ ಬರುವುದಾಗಿ ಹೇಳಿ ಹೋಗಿ ತಡರಾತ್ರಿಯಾದರೂ ಮನೆಗೆ ಹಿಂದಿರುಗಿಲ್ಲವಾದ್ದರಿಂದ ತಾಯಿ ನಗರ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಶಂಕರೇಗೌಡನನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಏನೂ ಗೊತ್ತಿಲ್ಲ ಎಂಬ ಹೇಳಿಕೆ ನೀಡಿದ್ದ. ಮಗ ಪತ್ತೆಯಾಗದ ಕಾರಣ ಪಾಲಕರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಮಗನ ಪತ್ತೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ವಕೀಲ ಶಂಕರೇಗೌಡ ಮತ್ತು ಬಾಲಕನ ಪೋನ್ ಸಂಭಾಷಣೆ ಪತ್ತೆಹಚ್ಚಿದಾಗ ವಕೀಲ ಶ್ರೇಯಸ್ ಜತೆ ಮಾತನಾಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ವಕೀಲನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ 10 ದಿನ ಪೊಲೀಸರ ವಶಕ್ಕೆ ಒಪ್ಪಿಸಿದರೂ ಈತ ಬಾಯ್ಬಿಡದ ಹಿನ್ನೆಲೆಯಲ್ಲಿ ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಪ್ರಕರಣದ ತೀವ್ರತೆ ಅರ್ಥ ಮಾಡಿಕೊಂಡ ಪೊಲೀಸರು ಜಿ.ಎಸ್.ಶಂಕರೇಗೌಡ ಜತೆಯಲ್ಲಿದ್ದ ಮತ್ತೊಬ್ಬ ಮೈಸೂರಿನ ಅರುಣ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ಶ್ರೇಯಸ್, ರಾತ್ರಿ ಇಡೀ ಕೊಠಡಿಯಲ್ಲಿ ವಕೀಲನ ಜತೆಗಿದ್ದ ಎಂಬ ಮಾಹಿತಿ ನೀಡಿದ್ದ.
ಹುಡುಗ ಎಲ್ಲಿದ್ದಾನೆ?: ಶ್ರೇಯಸ್ ಮಕ್ಕಳ ಸಾಗಾಣಿಕೆ ಜಾಲಕ್ಕೆ ಒಳಗಾಗಿದ್ದಾನಾ ಎನ್ನುವ ಅನುಮಾನ ಕಾಡುತ್ತಿದೆ. ನಾಪತ್ತೆ ಪ್ರಕರಣದ ಬಗ್ಗೆ ಪಾಲಕರಿಗಾಗಲಿ ಜನರಿಗಾಗಲಿ ಸ್ಪಷ್ಟ ಮಾಹಿತಿ ಇಲ್ಲ. ವಕೀಲನ ಬಂಧನದ ನಂತರ ಪೊಲೀಸರು ಆತನ ಹುಟ್ಟೂರು ಗಬ್ಬಾಡಿಯ ಕೆರೆ ಕಟ್ಟೆ ಸುತ್ತಮುತ್ತ ಹುಡುಕಾಡಿದರೂ ಹುಡುಗ ಪತ್ತೆಯಾಗಿಲ್ಲ. ವಿಚಾರಣೆ ವೇಳೆ ವಕೀಲ ಯಾವೊಂದು ವಿಷಯ ಬಾಯಿಬಿಟ್ಟಿಲ್ಲ ಎನ್ನುವ ವಿಷಯ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
2 ವರ್ಷ ಹಿಂದೆ ನಾಪತ್ತೆಯಾದವರೂ ಪತ್ತೆಯಾಗಿಲ್ಲ: ಎರಡು ವರ್ಷಗಳ ಹಿಂದೆ ಕಾಣೆಯಾದ ಅಪ್ರಾಪ್ತ ಬಾಲಕ- ಬಾಲಕಿಯರ ಪ್ರಕರಣ ಇದುವರೆವಿಗೂ ಪತ್ತೆಯಾಗಿಲ್ಲ. ಇದರಲ್ಲಿ ಪೊಲೀಸರ ದಕ್ಷತೆ ಏನು ಎನ್ನುವ ಪ್ರಶ್ನೆ ಕಾಡುತ್ತಿದೆ. ಈ ಇಬ್ಬರೂ ಮಕ್ಕಳು ಬದುಕಿದ್ದಾರಾ? ಅಥವಾ ಮೃತಪಟ್ಟಿದ್ದಾರಾ? ಎನ್ನುವ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಪಾಲಕರು ಮಕ್ಕಳ ಬಗ್ಗೆ ಆತಂಕದಿಂದ ಇರುವಂತಾಗಿದೆ.
ಮನೆಯಿಂದ ಹೊರಹೋದ ಮಗ ಇನ್ನೂ ಮನೆಗೆ ಬಂದಿಲ್ಲ. ಬದುಕಿದ್ದಾನಾ, ಸತ್ತಿದ್ದಾನಾ ಅಥವಾ ಎಲ್ಲಿದ್ದಾನೆ ಎಂಬ ಮಾಹಿತಿ ಗೊತ್ತಾಗಿಲ್ಲ. ಆಶಾ, ಶ್ರೇಯಸ್ನ ತಾಯಿ *** ಕನಕಪುರ ವಕೀಲ ಶಂಕರೇಗೌಡ ಮತ್ತು ಕಾಣೆಯಾಗಿರುವ ಬಾಲಕ ಇಬ್ಬರೂ ಸಂಪರ್ಕದಲ್ಲಿ ಇದ್ದಿದ್ದು ತನಿಖೆ ವೇಳೆ ಖಚಿತಗೊಂಡಿದೆ. ಮನೆಯಲ್ಲಿದ್ದ ಬಾಲಕನನ್ನು ಸ್ಥಳಕ್ಕೆ ಕರೆಸಿಕೊಂಡಿರುವುದೂ ಖಚಿತಗೊಂಡಿದೆ. ರಾತ್ರಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆಯ ವೇಳೆ ತಿಳಿದುಬಂದಿದೆ. ಎಫ್.ಐ.ಆರ್. ದಾಖಲಿಸಿದಾಗ ತನಿಖೆಗಾಗಿ 10 ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಅವಧಿ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ತನಿಖೆ ವೇಳೆ ಬಾಲಕನ ನಾಪತ್ತೆ ಬಗ್ಗೆ ವಕೀಲ ಯಾವ ಸುಳಿವನ್ನೂ ಬಿಟ್ಟಿಲ್ಲ. ಮುಂದೆ ನಮ್ಮದೇ ರೀತಿಯಲ್ಲಿ ತನಿಖೆ ಮಾಡುತ್ತೇವೆ. ಕೆ.ಸಂತೋಷ್ಬಾಬು, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ