

ಬೆಳಗಾವಿ: ಹಿರಣ್ಯಕೇಶಿ ನದಿಯ ಹಿನ್ನೀರಿನಲ್ಲಿ ಬಾಲಕನ ರುಂಡವಿಲ್ಲದ ಮೃತದೇಹ ಪತ್ತೆಯಾಗಿದ್ದ ಪ್ರಕರಣ ಬೇಧಿಸಿರುವ ಹುಕ್ಕೇರಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ ತಿಳಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಕ್ಕೇರಿ ತಾಲೂಕಿನ ಹೊಸೂರ ಗ್ರಾಮದ ನೂರಅಹ್ಮದ್ ಕೊಣ್ಣೂರ (60) ಮತ್ತು ಹನುಮಂತ ಬೇವನೂರ (40) ಬಂಧಿತರು. ಹೊಸೂರ ಗ್ರಾಮದ ಮೃತ ಬಾಲಕ ಮಾಳಪ್ಪ ಮಾನೆ (12) ಕೊಲೆಗೀಡಾದ ಬಾಲಕ. ಸೆ.20ರಂದು ಬಾಲಕ ನಾಪತ್ತೆ ಆಗಿರುವ ಬಗ್ಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿರಣ್ಯಕೇಶಿ ನದಿಯ
ಹಿನ್ನೀರಿನಲ್ಲಿ ಬಾಲಕನ ಶವ ಪತ್ತೆಯಾಗಿದ್ದರಿಂದ ವಿಚಾರಣೆ ಆರಂಭಿಸಿದ ತಂಡಕ್ಕೆ ಬಾಲಕನನ್ನು ಕೊಲೆಗೈದು ನದಿಗೆ ಎಸೆದಿರುವುದು ತನಿಖೆಯಲ್ಲಿ ಗೊತ್ತಾಗಿತ್ತು. ಒಂದೇ ವಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಎಂದರು.ಅತ್ತೆ ದೂರಾಗಿದ್ದಕ್ಕೆ ಅಳಿಯ ಬಲಿ!: ಮೂಲತಃ ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ್ ಗ್ರಾಮದ ಬಾಲಕ ಶಾಲೆ ಕಲಿಯುವುದಕ್ಕಾಗಿ ಹುಕ್ಕೇರಿ ತಾಲೂಕಿನ ಹೊಸೂರ ಗ್ರಾಮದ ಅತ್ತೆ ಮನೆಯಲ್ಲಿ ವಾಸವಾಗಿದ್ದ. ಕೊಲೆ ಪ್ರಕರಣದ ಪ್ರಮುಖ ಆರೋಪಿ ನೂರಅಹ್ಮದ್ ಕೊಣ್ಣೂರ ಬಾಲಕನ ಅತ್ತೆ ಜತೆಗೆ ಅನೈತಿಕ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಿದ್ದ. ಆದರೆ, ಆಕೆ ಒಲಿದಿರಲಿಲ್ಲ. ಹಾಗಾಗಿ ಸಿಟ್ಟಿನಿಂದ ಕುಡುಗೋಲಿನಿಂದ ಬಾಲಕನ ರುಂಡ ಬೇರ್ಪಡಿಸಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಾಕ್ಷೃ ನಾಶ ಮಾಡಲು ಸ್ನೇಹಿತ ಹನುಮಂತ ಬೇವನೂರ ಸಹಾಯ ಪಡೆದ ನೂರಅಹ್ಮದ್, ಬಾಲಕನ ರುಂಡವಿಲ್ಲದ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಗುಡಸ್ ಗ್ರಾಮ ವ್ಯಾಪ್ತಿಯ ಹಿರಣ್ಯಕೇಶಿ ನದಿ ಹಿನ್ನೀರಿಗೆ ಹಾಗೂ ಬಾಲಕ ಧರಿಸಿದ್ದ ಶಾಲಾ ಬ್ಯಾಗ್ ಮತ್ತು ಆತನ ಸೈಕಲ್‌ನ್ನು ಗ್ರಾಮದ ಬಾವಿಯೊಂದರಲ್ಲಿ ಎಸೆದಿದ್ದರು.
ಸೆ.20 ರಂದು ರುಂಡವಿಲ್ಲದ ದೇಹ ಪತ್ತೆಯಾಗುತ್ತಿದ್ದಂತೆ ಅಗ್ನಿಶಾಮಕ ದಳದೊಂದಿಗೆ ಕಾರ್ಯಚರಣೆಗಿಳಿದ ತಂಡ ಬಾಲಕನ ರುಂಡ ಮತ್ತು ಇನ್ನುಳಿದ ಸಾಕ್ಷೃಗಳ ಪತ್ತೆಗಾಗಿ ಗ್ರಾಮ ವ್ಯಾಪ್ತಿಯ 6 ಬಾವಿಯಲ್ಲಿ ಶೋಧಕಾರ್ಯ ನಡೆಸಿ, ಸೈಕಲ್ ಹಾಗೂ ಬ್ಯಾಗ್ ಪತ್ತೆಯಾಗಿತ್ತು.