

ಬೀದರ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆ ಸಹಯೋಗದಡಿ ಬಗದಲ್ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಚಿಗುರು ಕಾರ್ಯಕ್ರಮ 8ರಿಂದ 14 ವರ್ಷದೊಳಗಿನ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಟ್ಟಿತು.
ಏಳು ಕಲಾ ತಂಡಗಳು ಪ್ರತಿಭೆ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವೆನಿಸಿದ್ದಾರ. ಸಂಗಮೇಶ ನೇತೃತ್ವದ ತಂಡದ ಜೀವಜಲ ನಾಟಕ ಗಮನ ಸೆಳೆಯಿತು. ಸ್ನೇಹಾ ಸಿದ್ಧಾರ್ಥ ಏಕ ಪಾತ್ರಾಭಿನಯ, ಶಿವಾನಿ ಮತ್ತು ತಂಡದ ಶಾಸ್ತ್ರೀಯ ಸಂಗೀತ, ಸ್ಪಂದನಾ ಕೃಷ್ಣ ಮತ್ತು ತಂಡದ ಸುಗಮ ಸಂಗೀತ, ಶೀಲವಾನರಾಜ ಮತ್ತು ತಂಡ, ಹಣಮಂತ ಮತ್ತು ತಂಡದ ಜಾನಪದ ಗೀತೆ ಮತ್ತು ವೈಷ್ಣವಿ ಬಸವರಾಜ ತಂಡದ ಸಮೂಹ ನೃತ್ಯ ಸಭಿಕರನ್ನು ಮೂಕವಿಸ್ಮಿತರನ್ನಾಗಿಸಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಕಲಾವಿದರ ಮಾಸಾಶನ ವಯೋಮಿತಿಯನ್ನು 58ರಿಂದ 45 ವರ್ಷಕ್ಕೆ ಇಳಿಸುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆು ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚಿಸಿದ್ದೇನೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುವುದು ಚಿಗುರು ಕಾರ್ಯಕ್ರಮದ ಉದ್ದೇಶ. ಇಲಾಖೆಯು ದೇಸಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಉತ್ತೇಜನ ನೀಡುವ ದಿಸೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಚನ್ನಬಸವ ಹೇಡೆ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪತ್ರಾಂಕಿತ ವ್ಯವಸ್ಥಾಪಕಿ ನಾಗವೇಣಿ, ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಗೊರಗಿ, ಸದಸ್ಯರಾದ ಕಾಶೀನಾಥ, ಧರ್ಮಾಬಾಯಿ, ಮಿಟ್ಟುಸಿಂಗ್, ಸರಸ್ವತಿ ಇದ್ದರು. ದೇವಿದಾಸ ಜೋಶಿ ನಿರೂಪಣೆ ಮಾಡಿದರು.