ಬಾಲ ಕಾರ್ಮಿಕರ ಪತ್ತೆ ಕಾರ್ಯಾಚರಣೆ ತೀವ್ರಗೊಳಿಸಿ

ctd...5
Published on

ಚಿತ್ರದುರ್ಗ: ಬಾಲ ಕಾರ್ಮಿಕರ ಪತ್ತೆಗೆ ಜಿಲ್ಲಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ದಾಳಿ ಕಾರ್ಯಾಚರಣೆ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಜಿಲ್ಲಾ ಮಟ್ಟದ ಕಾರ‌್ಯಪಡೆ ಮತ್ತು ಕಾರ‌್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಬಾಲ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ತಾಲೂಕು ಮಟ್ಟದ ಕಾರ‌್ಯಪಡೆಗಳನ್ನು ರಚಿಸಿ ಕಾ ರ್ಮಿಕ ಇಲಾಖೆ ಅಧಿಕಾರಿಗಳು ಜಂಟಿ ಕಾರ‌್ಯಾಚರಣೆ ಕೈಗೊಳ್ಳಬೇಕು.

ಗಣಿ, ಕಲ್ಲು ಕ್ವಾರಿ, ಪೌಲ್ಟ್ರೀಫಾರಂ, ಇಟ್ಟಿಗೆ ಭಟ್ಟಿ, ಹೋಟೆಲ್, ಗ್ಯಾರೇಜ್‌ಗಳ ಮೇಲೆ ಹಠಾತ್ ದಾಳಿ ನಡೆಸಿ ತಪಾಸಣೆ ಕೈಗೊಳ್ಳಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳು ಬಾಲಕಾರ್ಮಿಕರಾಗಿ ಕೆಲಸ ಮಾಡುವ ಸಂಭವ ಹೆಚ್ಚು ಇರುತ್ತದೆ. ಇವರನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿ ಶಿಕ್ಷಣದ ಮುಖ್ಯವಾಹಿನಿಗೆ ತರಬೇಕು. ಗಣಿ, ಕಲ್ಲು ಕ್ವಾರಿ ಕೆಲಸದಲ್ಲಿ ಬಾಲ ಕಾರ್ಮಿಕರು ಕಂಡು ಬಂದರೆ ಸಂಬಂಧಿಸಿದ ಗಣಿಗಾರಿಕೆ ಲೈಸೈನ್ಸ್ ರದ್ದು ಮಾಡಿ, ಪ್ರಕರಣ ದಾಖಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರಿಗೆ ನಿರ್ದೇಶಿಸಿದರು.

ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ ಶಿಕ್ಷಣ ಸಂವಹನ ಕಾರ‌್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸಬೇಕು. ಬೀದಿ ನಾಟಕಗಳ ಪ್ರದರ್ಶನದ ವೇಳೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಕಾರ‌್ಯಕ್ರಮಕ್ಕೆ ಆಹ್ವಾನಿಸಬೇಕು. ಗ್ರಾಪಂಗಳಲ್ಲಿ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಸೂಚನಾ ಫಲಕಗಳನ್ನು ಅಳವಡಿಸಬೇಕೆಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು.

ಜಿಲ್ಲಾ ಕಾರ್ಮಿಕಾಧಿಕಾರಿ ಅನಿಲ್ ಬಾಲಚಂದ್ರ ಭಗತಿ ಮಾತನಾಡಿ, 2024-25 ಸಾಲಿನಲ್ಲಿ 1045 ಕಾರ್ಯಾಚರಣೆ ನಡೆಸಿ, 6 ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ. ನಾಲ್ವರು ಮಾಲೀಕರ ವಿರುದ್ಧ ಮೊಕದ್ದಮೆ ಹೂಡಲಾಗಿದೆ ಎಂದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಬೈಲಾ ತಿದ್ದುಪಡಿ ಮಾಡಿ, ಸಂಚಿತ ನಿಧಿ ಬ್ಯಾಂಕ್ ಖಾತೆಯ ಹೆಸರನ್ನು ಬದಲಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

ಸಹಕಾರಿ ಸಂಘ ಸ್ಥಾಪನೆ

ವಿವಿಧ ಇಲಾಖೆಗಳಿಗೆ ಹೊರ ಗುತ್ತಿಗೆ ಕಾರ್ಮಿಕರ ಸೇವೆ ಒದಗಿಸಲು ಬೀದರ್ ಜಿಲ್ಲಾ ಮಾದರಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಾಪಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಹೊರಗುತ್ತಿಗೆ ಕಾರ್ಮಿಕರನ್ನು ಒದಗಿಸುವ ಕಂಪನಿಗಳು ಇಎಸ್‌ಐ, ಪಿಎಫ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುವುದಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ, ಕಾರ್ಮಿಕ ಇಲಾಖೆ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಾಪಿಸಿ, ಈ ಸೊಸೈಟಿಯಿಂದ ಮಾನವ ಸಂಪನ್ಮೂಲವನ್ನು ವಿವಿಧ ಇಲಾಖೆಗಳಿಗೆ ಒದಗಿಸಬಹುದು.

ಜಿಲ್ಲೆಯಲ್ಲಿ 800 ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಸೂಚನೆಯಂತೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಅಭ್ಯರ್ಥಿಗಳಿಗೆ ಹೊರಗುತ್ತಿಗೆ ಕೆಲಸದಲ್ಲಿ ಮೀಸಲಾತಿ ನೀಡಲು ಕೂಡ ಈ ಸೊಸೈಟಿಯಿಂದ ಸಹಾಯವಾಗಲಿದೆ. ಜತೆಗೆ ನೌಕರರಿಗೆ ಕಾಲ, ಕಾಲಕ್ಕೆ ವೇತನ ಮತ್ತಿತರ ಸೌಲಭ್ಯ ಸಮರ್ಪಕವಾಗಿ ದೊರಕುತ್ತಿಲ್ಲವೆಂಬ ದೂರುಗಳಿಗೂ ಕೂಡ ಕಡಿವಾಣ ಹಾಕಬಹುದಾಗಿದೆ ಎಂದರು.

ಈಗಾಗಲೇ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ನೌಕರರ ಸಂಬಳದ ಖಾತೆಯನ್ನು ಡಿಸಿಸಿ ಬ್ಯಾಂಕ್‌ಗಳಲ್ಲಿ ತೆರೆಯಲಾಗುವುದು. ಸಾಲ ಸೌಲಭ್ಯಕ್ಕಾಗಿ ಸಂಘದ ಸದಸ್ಯರ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಜಿಲ್ಲಾ ಕಾರ್ಮಿಕಾಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net